ಪಂಚ ಗ್ಯಾರಂಟಿ ಯೋಜನೆ ನಿಖರ ಮಾಹಿತಿ ಒದಗಿಸಿ: ಧರ್ಮಜ ಉತ್ತಪ್ಪ

KannadaprabhaNewsNetwork |  
Published : Nov 20, 2025, 01:30 AM IST

ಸಾರಾಂಶ

ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಭಣದಲ್ಲಿ ಗ್ಯಾರೆಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಜಿಲ್ಲಾ ಮಟ್ಟದ ಗ್ಯಾರೆಂಟಿ ಸಮಾವೇಶ ಪೂರ್ವಸಿದ್ಧತೆ ಸಂಬಂಧ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನ. 21 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ನ.22 ರಂದು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಅಧಿಕಾರಿಗಳು ಅಂಕಿ ಅಂಶಗಳ ಸಹಿತ ನಿಖರ ಮಾಹಿತಿ ಒದಗಿಸುವಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ ಪೂರ್ವಸಿದ್ಧತೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಈ ಕಾರ್ಯಕ್ರಮಗಳು ಸರ್ಕಾರದ ಮಹತ್ವಾಕಾಂಕ್ಷೆ ಆಗಿದೆ. ಈ ಸಂಬಂಧ ಅಂಕಿ ಅಂಶಗಳ ಸಹಿತ ಮಾಹಿತಿ ಒದಗಿಸಬೇಕು. ಅಂಕಿ ಅಂಶಗಳು ತಾಳೆಯಾಗುವಂತೆ ಇರಬೇಕು ಎಂದು ಧರ್ಮಜ ಉತ್ತಪ್ಪ ಅವರು ಸೂಚಿಸಿದರು.

ಜಿಲ್ಲೆಯ ಕೆಲವು ಕಡೆಗಳಲ್ಲಿ ಬಡವರಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಇದನ್ನು ಸರಿಪಡಿಸಿ ಬಿಪಿಎಲ್ ಕಾರ್ಡ್ ನೀಡುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತಾಗಬೇಕು. ಕಡು ಬಡವರಿಗೆ ಬಿಪಿಎಲ್ ಕಾರ್ಡ್ ದೊರೆಯಬೇಕು ಎಂದು ಧರ್ಮಜ ಉತ್ತಪ್ಪ ಅವರು ತಿಳಿಸಿದರು.

ಕೊಡಗು ಜಿಲ್ಲೆ ಮಲೆನಾಡು ಭಾಗವಾಗಿರುವುದರಿಂದ ಹೆಚ್ಚಿನ ಮಳೆಯಿಂದಾಗಿ ಬಡ ಕುಟುಂಬಗಳು ಬೈಕ್ ಇಟ್ಟುಕೊಂಡಿರುತ್ತಾರೆ. ಅಂತಹ ಕುಟುಂಬಗಳಿಗೂ ಸಹ ಎಪಿಎಲ್ ಕಾರ್ಡ್ ನೀಡಲಾಗಿದೆ. ಈ ರೀತಿ ಆದರೆ ಕಡು ಬಡವರು ಬದುಕುವುದಾದರೂ ಹೇಗೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಪ್ರಶ್ನಿಸಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಅಧಿಕಾರಿಗಳು ನಿಖರ ಮಾಹಿತಿ ಒದಗಿಸುವುದರ ಜೊತೆಗೆ ಕಾರ್ಯಾಗಾರದ ದಿನದಂದು ಪಂಚ ಗ್ಯಾರಂಟಿ ಯೋಜನಾ ಇಲಾಖೆಗಳು ವಸ್ತು ಪ್ರದರ್ಶನದ ‘ಮಾಹಿತಿ ಮಳಿಗೆ’ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಗ್ಯಾರಂಟಿ ಯೋಜನೆ ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್, ಪಿ.ಆರ್.ಪಂಕಜ ಅವರು ಗ್ಯಾರಂಟಿ ಯೋಜನೆ ಅನುಷ್ಠಾನ ಮತ್ತಿತರ ಸಂಬಂಧ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು.

ಸದಸ್ಯರಾದ ಬಿ.ಒ.ಅಣ್ಣಯ್ಯ, ಸುಂದರ, ಕೆ.ಎಂ.ಬಶೀರ್, ಧನ್ಯ, ಕೆ.ಜಿ.ಫೀಟರ್, ಮಂದ್ರಿರ ಮೋಹನ್ ದಾಸ್, ಇತರರು ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನ, ಬಸ್‍ಗಳ ಸಂಚಾರ, ಗೃಹಲಕ್ಷ್ಮಿ ಯೋಜನೆ ಪ್ರಗತಿ ಸಂಬಂಧ ಗಮನ ಸೆಳೆದರು.

ಯುವನಿಧಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್ ಅವರು ಇದುವರೆಗೆ ಅಕ್ಟೋಬರ್ ಅಂತ್ಯದವರೆಗೆ 1563 ಪದವೀಧರರು ಮತ್ತು 22 ಡಿಪ್ಲೋಮಾ ಪದವೀಧರರು ಒಟ್ಟು 1585 ಮಂದಿ ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ್ದು, ಫಲಾನುಭವಿಗಳಿಗೆ ಡಿಬಿಟಿ ಮೂಲಕ ಅಕ್ಟೋಬರ್ ಅಂತ್ಯದವರೆಗೆ 391.65 ಲಕ್ಷ ರು.. ಪಾವತಿಯಾಗಿದೆ ಎಂದು ವಿವರಿಸಿದರು.

PREV

Recommended Stories

ಡಿ. 4 ರಂದು ಕೊಡಗಿನ ಹುತ್ತರಿ ಹಬ್ಬ
ಬಿಹಾರದಲ್ಲಿ ಕಪಾಳಮೋಕ್ಷ, ರಾಹುಲ್ ಗಾಂಧಿ ಕಾಣೆ: ಬಿ.ವೈ.ವಿಜಯೇಂದ್ರ