ಉಡುಪಿಗೆ ಮೋದಿ ಭೇಟಿ ಹಿನ್ನೆಲೆ ಸಮಾಲೋಚನೆ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆಯಲಿ, ಬಿಜೆಪಿ ಸ್ವಂತ ಶಕ್ತಿಯಿಂದ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ, ಅನುಮಾನನೇ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ಅವರು ಬುಧವಾರ, ನ.28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿ ಕೃಷ್ಣಮಠಕ್ಕೆ ಬರುವ ಕಾರ್ಯಕ್ರಮದ ಸಮಾಲೋಚನೆ ಮತ್ತು ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ರೈತರು ಬೆಳೆಯುವ ಕಬ್ಬಿಗೆ ಬೆಂಬಲ ಬೆಲೆ ಇಲ್ಲ, ಕಬ್ಬಿನಿಂದ ತಯಾರಿಸುವ ಮದ್ಯದಿಂದ ಬರುವ ಆದಾಯಬೇಕು, ಆದರೆ ರೈತರಿಗೆ ಆದಾಯ ಹೆಚ್ಚುವುದರಲ್ಲಿ ಸರ್ಕಾರಕ್ಕೆ ಆಸಕ್ತಿ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆರಿಸಿ ತಪ್ಪು ಮಾಡಿದ್ದೇವೆ ಎಂದು ಜನತೆಗೆ ಗೊತ್ತಾಗಿದೆ. ಜನತೆ ಮತ್ತೆ ಬಿಜೆಪಿಯನ್ನು ಬಯಸುತ್ತಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಂತ್ರಿಗಳಿಗೆ ಅಧಿಕಾರದ ಮದ ಏರಿದೆ. ಸರ್ವ ಇಲಾಖಾ ಮಂತ್ರಿ ಪ್ರಿಯಾಂಕ್ ಖರ್ಗೆ ತಮ್ಮ ಗ್ರಾಮೀಣಾಬಿವೃದ್ಧಿ ಇಲಾಖೆಯ ಕುರಿತು ಒಂದೇ ಒಂದು ಮಾತು ಆಡುವುದಿಲ್ಲ, ದೇಶವಿದೇಶಗಳ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ವಿಜಯೇಂದ್ರ ಟೀಕಿಸಿದರು.ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ನಮ್ಮ ಪಕ್ಷದ ನಾಯಕರೇ ಸಂಶಯ ವ್ಯಕ್ತಪಡಿಸುತ್ತಿದ್ದರು. ಆದರೆ ನರೇಂದ್ರ ಮೋದಿ ಅವರು ಈ ಅಸಾಧ್ಯವನ್ನೂ ಸಾಧ್ಯವನ್ನಾಗಿ ಮಾಡಿದರು ಮತ್ತು 12 ವರ್ಷಗಳಿಂದ ಪ್ರಧಾನಿಯಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ರಾಜಕೀಯೇತರ ಕುಟುಂಬದಿಂದ ಬಂದ ಅವರು ತಮ್ಮ ಸ್ವಂತ ಅನುಭವದಿಂದಲೇ ಪ್ರಧಾನಿಯಾದವರು. ಅವರು ಉಡುಪಿಗೆ ಬರುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯ್ತು, ಇನ್ನೂ ಕಾರ್ಮಿಕರಿಗೆ ಇಎಸ್‌ಐ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಜಾರಿ ಮಾಡುತ್ತಿಲ್ಲ, ಬಡವರಿಗೆ ಒಂದೇ ಒಂದು ನಿವೇಶನ ನೀಡಿಲ್ಲ, ಪಿಎಂ ವಸತಿ ಯೋಜನೆ ನೀಡಿಲ್ಲ, ಗ್ರಾಮೀಣ ಪ್ರದೇಶದ ಜನರಿಗಾಗಿ ಇದನ್ನೆಲ್ಲ ಮಾಡಿ ಅಂದ್ರೆ, ಪ್ರಿಯಾಂಕ ಖರ್ಗೆ, ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಗೃಹಲಕ್ಷ್ಮೀ ಚುನಾವಣಾ ಲಕ್ಷ್ಮೀಯಾಗಿದೆ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು 60 ಸಾವಿರ ಬಸ್ ಬೇಕು, ಆದರೆ 20 ಸಾವಿರ ಬಸ್‌ಗಳು ಮಾತ್ರ ಓಡುತ್ತಿವೆ, ಒಂದು ಗ್ರಾಮದಲ್ಲಿ 8-10 ಯುವಕರಿಗೂ ಯುವನಿಧಿ ಸಿಕ್ತಿಲ್ಲ. ಬೆಲೆ ಏರಿಸಿ ಪುರುಷರಿಂದ ತಿಂಗಳಿಗೆ 3 ಸಾವಿರ ಕಿತ್ತುಕೊಂಡು, ಮಹಿಳಯರಿಗೆ 2 ಸಾವಿರ ಕೊಡ್ತಿದ್ದಾರೆ, ಅಲ್ಲೂ 1 ಸಾವಿರ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಬಿಹಾರದ ಫಲಿತಾಂಶ ಮೋದಿ ಸರ್ಕಾರದ 12 ವರ್ಷಗಳ ಆಡಳಿತಕ್ಕೆ ನೀಡಿದ ಸಹಮತದ ಸಂಕೇತ. ಮೋದಿ ಕರಾವಳಿಗೆ ಬರುತ್ತಿರುವುದರಿಂದ ರಾಜ್ಯದಲ್ಲಿಯೂ ಬಿಹಾರದ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಶಾಸಕರಾದ ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜಾ, ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಮೆಂಡನ್, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ ಉಪಸ್ಥಿತರಿದ್ದರು.ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.