ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವಾರ್ಷಿಕೋತ್ಸವ, ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪತ್ರಿಕಾ ಭವನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವಾರ್ಷಿಕೋತ್ಸವ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪತ್ರಿಕಾಭವನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವವನ್ನು ಉದ್ಯಮಿ ಮೋರಿಕಲ್ಲು ಗ್ರಾಮದ ಗಿರೀಶ್ ಮಲ್ಲಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ಪತ್ರಕರ್ತರೂ ಸಹ ದೇಶದ ಸೈನಿಕರಂತೆ ಕೆಲಸ ಮಾಡುತ್ತಿದ್ದು, ಯಾವುದೇ ತುರ್ತು ಸಂದರ್ಭ ಸ್ಥಳಕ್ಕೆ ಹಾಜರಾಗಿ, ಮಳೆ, ಗಾಳಿ ಲೆಕ್ಕಿಸದೆ ಕಷ್ಟಪಟ್ಟು ನೈಜ ವರದಿಯನ್ನು ನೀಡುವ ಮೂಲಕ ಎಲ್ಲರಿಗೂ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಆದರೂ, ಸಾಕಷ್ಟು ಪತ್ರಕರ್ತರು ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿದ್ದು, ಸರ್ಕಾರ ಇವರ ನೆರವಿಗೆ ನಿಲ್ಲಬೇಕು ಎಂದರು ಹೇಳಿದರು.ಕೊಡಗು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಟಿ. ಅನೀಲ್ ಮಾತನಾಡಿ, ಇಂದು ಪತ್ರಕರ್ತರು ಹಾಗೂ ಮಾಧ್ಯಮದವರನ್ನು ನೆನೆಯುವಂತಹ ದಿನವಾಗಿದೆ. ಟಿವಿ, ರೇಡಿಯೋ ಗಳನ್ನು ಬದಿಗೊತ್ತಿ ನೋಡುವುದಾದರೆ, ಇಂದು ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಪತ್ರಿಕೋದ್ಯಮಕ್ಕೂ ಪದಾರ್ಪಣೆ ಮಾಡುವ ಮೂಲಕ ಪತ್ರಕರ್ತರು, ಛಾಯಾಚಿತ್ರಗಾರರು ಹಾಗೂ ಚಿತ್ರಕಲಾವಿದರು ಸೇರಿದಂತೆ ಹಲವರ ಕೆಲಸವನ್ನು ಕಸಿದುಕೊಳ್ಳುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದೆ. ನಾವು ಈಗಲೆ ಇದರ ಬಗ್ಗೆ ಎಚ್ಚೆತ್ತುಕೊಳ್ಳುವ ಮೂಲಕ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ ತಮ್ಮ ತಂದೆ ದಿ. ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ದತ್ತಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅಂತರರಾಷ್ಟ್ರೀಯ ಕ್ರೀಡೆಗೆ ತಾಯಿ-ಮಗ ಆಯ್ಕೆ ವಿಶೇಷ ವರದಿಗೆ ತೇಲಪಂಡ ಕವನ್ ಕಾರ್ಯಪ್ಪ, ತಾಲೂಕು ಘಟಕದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ತಮ್ಮ ತಂದೆ ದಿ. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿಗೆ ಶಕ್ತಿ ಪತ್ರಿಕೆಯ ಐಗೂರಿನಲ್ಲಿ ಇನ್ನೂ ಪ್ರಾರಂಭವಾಗದ ಸೇತುವೆ ಕಾಮಗಾರಿ ವಿಶೇಷ ವರದಿಗೆ ಎಂ.ಎ. ಸುಕುಮಾರ್ ಅವರು ಪಡೆದರು.ಜಿಲ್ಲಾ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಮ್ಮ ತಾಯಿ ದಿ. ತೇಲಪಂಡ ಶಾರದ ಮತ್ತು ಸೋಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ದತ್ತಿ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪೌರ ಕಾರ್ಮಿಕರಿಗೆ ತಪ್ಪದ ಸಂಕಷ್ಟ ವಿಶೇಷ ವರದಿಗೆ ಡಿ.ಪಿ. ಲೋಕೇಶ್ ಅವರಿಗೆ ಹಾಗೂ ಕಾನ್ವೆಂಟ್ ಬಾಣೆ ನಿವಾಸಿ ಯಶಸ್ವಿನಿ ಚಂದ್ರಕಾಂತ್ ತಮ್ಮ ತಂದೆ ದಿ. ಕೂಗೂರು ತಿಮ್ಮಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿಗೆ ಕೈಕೊಟ್ಟ ಮಳೆ ಬೆಳೆಗಾರ ಕಂಗಾಲು ದತ್ತಿ ಪ್ರಶಸ್ತಿಯನ್ನು ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗೆ ಎಸ್.ಎ. ಮುರಳೀಧರ ಅವರು ಬಾಜನರಾದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸುಂಟಿಕೊಪ್ಪದ ಉದ್ಯಮಿ ಹಾಗೂ ಸಮಾಜಸೇವಕ ಹನೀಪ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.