ದೇಶದ ಅಭಿವೃದ್ಧಿಯ ಬುನಾದಿ ಇಂದಿರಾ ಗಾಂಧಿ: ಅಭಯಚಂದ್ರ ಜೈನ್‌

KannadaprabhaNewsNetwork |  
Published : Nov 20, 2025, 01:30 AM IST
ಇಂದಿರಾ ಗಾಂಧಿ ಭಾವಚಿತ್ರಕ್ಕೆ ಗೌರವ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಅಭಯಚಂದ್ರ ಜೈನ್ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜಾತಿ ಪದ್ಧತಿ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ ಜಾರಿಗೊಳಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಮಹಾನ್‌ ನಾಯಕಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಅಭಯಚಂದ್ರ ಜೈನ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಬುಧವಾರ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಧೀಮಂತ ಮಹಿಳೆ. ದೇಶದ ಏಕತೆಯ ದೃಷ್ಟಿಯಿಂದ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಬಡತನ ನಿರ್ಮೂಲನೆ ಕಾರ್ಯಕ್ರಮದ ಮೂಲಕ ಜನರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದರು. ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮುನ್ನ ಬಡವರು ಬ್ಯಾಂಕುಗಳ ಮೆಟ್ಟಿಲು ಹತ್ತಲು ಭಯ ಬೀಳುತ್ತಿದ್ದರು. ಶ್ರೀಮಂತರಿಗೆ ಮಾತ್ರ ಬ್ಯಾಂಕ್ ಖಾತೆ, ಸಾಲ, ಠೇವಣಿಗೆ ಅವಕಾಶ ಇತ್ತು. ಇಂದಿರಾ ಗಾಂಧಿ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ ಬಳಿಕ ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆಯಿತು. ಸಾಮಾಜಿಕ ಹಾಗೂ ಆರ್ಥಿಕವಾಗಿ ಇದ್ದ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ರೂಪಿಸಿದರು. ಭಾರತ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರನ್ನು ದೇಶದ ಜನತೆ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್ ಮಾತನಾಡಿ, ಇಂದಿರಾ ಗಾಂಧಿ ಅವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದವರು. ಬಡಜನರ ಬಗೆಗಿನ ಕಾಳಜಿ, ಅವರ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ ಎಂದರು.

ಇಂದಿರಾ ಗಾಂಧಿ ಅವರ ಜೀವನ, ಕೊಡುಗೆ, ಸಾಧನೆ ಕುರಿತು ಐರಿನ್ ರೆಬೆಲ್ಲೊ ಉಪನ್ಯಾಸ ನೀಡಿದರು.

ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ರಾಜ್ಯ ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮುಖಂಡರಾದ ರಮೇಶ್ ಶೆಟ್ಟಿ ಬೊಳಿಯಾರ್, ಪ್ರಕಾಶ್ ಸಾಲ್ಯಾನ್, ಜೋಕಿಂ ಡಿಸೋಜ, ದಿನೇಶ್ ಮುಳೂರು, ನಾರಾಯಣ್ ನಾಯಕ್, ಬಿ.ಎಂ. ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಬೇಬಿ ಕುಂದರ್, ಡೆನ್ನಿಸ್ ಡಿಸಿಲ್ವ ಮತ್ತಿತರರು ಇದ್ದರು. ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ ಸ್ವಾಗತಿಸಿದರು. ಎಸ್.ಅಪ್ಪಿ ವಂದಿಸಿದರು.

PREV

Recommended Stories

ಡಿ. 4 ರಂದು ಕೊಡಗಿನ ಹುತ್ತರಿ ಹಬ್ಬ
ಬಿಹಾರದಲ್ಲಿ ಕಪಾಳಮೋಕ್ಷ, ರಾಹುಲ್ ಗಾಂಧಿ ಕಾಣೆ: ಬಿ.ವೈ.ವಿಜಯೇಂದ್ರ