ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಅಧಿಕಾರಿಗಳಿಗೆ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಇದೇ ಮೇ 21, 22 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ನಾನಾ ಯೋಜನೆಗಳಡಿ ಸಾಧಿಸಲಾದ ಪ್ರಗತಿಯ ಪೂರಕ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನಲ್ಲಿ ಸಿಎಂ ನೇತೃತ್ವದ ಸಭೆ ಹಿನ್ನೆಲೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಸರಬರಾಜಾಗುವ ಕುಡಿಯುವ ನೀರಿನ ನಿಯಮಿತ ಪರೀಕ್ಷೆ, ಕ್ಲೋರಿನೇಷನ್ ತಪಾಸಣೆ ಹಾಗೂ ಇತರೆ ಕೈಗೊಳ್ಳುವ ಕಾರ್ಯದ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಬಿತ್ತನೆ ಕ್ಷೇತ್ರ, ರಸಗೊಬ್ಬರ ವಿತರಣೆ ಮತ್ತು ಬಾಕಿ ಇರುವ ದಾಸ್ತಾನು, ಬೆಳೆ ವಿಮೆಗೆ ರೈತರ ನೋಂದಣಿ ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿ ಒದಗಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮುಖ್ಯಮಂತ್ರಿಗಳ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ವಿವಿಧೆಡೆ ಬಾಕಿ ಇರುವ ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣ ಕಾಮಗಾರಿಯನ್ನು ಸ್ಥಳೀಯ ಶಾಸಕರ ಸಹಕಾರದಲ್ಲಿ ಪೂರ್ಣಗೊಳಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಡಿಯುಡಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಿ-ಖಾತಾ ವಿತರಣೆಯಲ್ಲಿ ಪ್ರಗತಿ ಹೊಂದಬೇಕು, ಬಿ-ಖಾತಾ ಅಭಿಯಾನ ಹೆಚ್ಚಾಗಿ ಆಯೋಜಿಸಬೇಕು. ತೆರಿಗೆ ಸಂಗ್ರಹಣ ವಿವರ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣಗಳ ವಿಲೇವಾರಿ ಮಾಹಿತಿ, ಎಸ್ಸಿ-ಎಸ್ಪಿ ಮತ್ತು ಟಿಎಸ್ಪಿ ಯೋಜನೆ ಅನುದಾನ ಬಳಕೆ, ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿಯಿರುವ ಅರ್ಜಿಗಳ ಮಾಹಿತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡ ಅವರು, ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರದೊಳಗಾಗಿ ಸಂಪೂರ್ಣ ಮಾಹಿತಿಯನ್ನು ಸೂಕ್ತ ನಮೂನೆಯಲ್ಲಿ ತಪ್ಪಿಲ್ಲದಂತೆ ಅಧಿಕಾರಿಗಳೇ ಖುದ್ದಾಗಿ ನಮೂದಿಸಬೇಕು. ಕಡ್ಡಾಯವಾಗಿ ಪ್ರಗತಿ ವರದಿಯನ್ನು ನಿಗದಿತ ಅವಧಿಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು.