ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನಲ್ಲಿ ರೈತರಿಗ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ಒಬ್ಬ ರೈತನಿಗೆ ಒಂದೇ ಚೀಲ ಗೊಬ್ಬರ ಎಂಬ ಅವೈಜ್ಞಾನಿಕ ನೀತಿ ಕೈಬಿಡಬೇಕು. ಈ ಹಿಂದೆ ಯಾವ ಮಾದರಿಯಲ್ಲಿ ರೈತರಿಗೆ ಗೊಬ್ಬರ ಕೊಡುತ್ತಿದ್ದರೋ ಅದೇ ರೀತಿ ಗೊಬ್ಬರ ಪೂರೈಸುವಂತೆ ವಿವಿಧ ರೈತಪರ ಸಂಘಟನೆಗಳ ಒಕ್ಕೂಟದ ಸದಸ್ಯ ರವಿಕಾಂತ ಅಂಗಡಿ ಆಗ್ರಹಿಸಿದರು.
ಇನ್ನೂ ಹೆಚ್ಚಿನ ಗೊಬ್ಬರಗಳ ಕಂಪನಿಗಳ ಕುರಿತು ರೈತರಿಗೆ ಮಾಹಿತಿ ಕೊಡಿ, ಯಾವ ಬೆಳೆಗಳಿಗೆ ಯಾವ ರಸಗೊಬ್ಬರ ಹಾಕಬೇಕು ಎಂಬುದು ಸ್ಪಷ್ಟನೆ ಕೊಡಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯವರು ರೈತ ಜನಜಾಗೃತಿ ಬಗ್ಗೆ ದುಡ್ಡನ್ನು ಖರ್ಚು ಮಾಡುತ್ತೀರಿ, ಮುಂಗಾರು ಪ್ರಾರಂಭದ ಪೂರ್ವದಲ್ಲಿ ರೈತರಿಗೆ ಜಾಗೃತಿ ಮೂಡಿಸಬೇಕು. ರೈತರಿಗೆ ಸಿಗುವ ಸೌಲಭ್ಯಗಳು ನೇರವಾಗಿ ರೈತರಿಗೆ ಮುಟ್ಟಿಸುವ ಕೆಲಸ ಆಗಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಣ ಮಾಡಬೇಕು. ಶಿರಹಟ್ಟಿ ಮತಕ್ಷೇತ್ರದಲ್ಲಿ ಬೆಳೆವಿಮೆ ಮಾಡುವಲ್ಲಿ ಜಿಪಿಎಸ್ ಮಿಸ್ ಮ್ಯಾಚ್ ಆಗಿ ಸಾವಿರಾರು ರೈತರಿಗೆ ವಿಮಾ ಸಿಗುತ್ತಿಲ್ಲ. ಮಿಸ್ ಮ್ಯಾಚ್ ಮಾಡಿದ ವ್ಯೆಕ್ತಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಅಗ್ರಹಿಸಿದರು.
ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ, ಕೃಷಿಕ ಸಮಾಜ(ನವದೆಹಲಿ) ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ಬೆಳೆವಿಮೆ ರೈತರಿಗೆ ಬಂದಿಲ್ಲ. ಆದಷ್ಟು ಬೇಗ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಎಂಎಸ್‌ಪಿ ಮೂಲಕ ಮಾರಿದ ಬೆಳೆಗಳಿಗೆ ಬೇಗನೆ ಹಣ ಜಮೆ ಮಾಡಬೇಕು. ಮುಂಗಾರು ಬಿತ್ತನೆ ಮಾಡಿಸುವ ಸಲುವಾಗಿ ರಸಗೊಬ್ಬರ ಸಂಗ್ರಹ ಮಾಡಿ ಇಡಬೇಕಾದ ಪರಿಸ್ಥಿತಿವಿದ್ದು, ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದರು.ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ರೈತರ ಸಮಸ್ಯೆ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ರೈತರ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ. ಶೀಘ್ರದಲ್ಲಿ ತಾಲೂಕಿನ ಕೊನೆಯ ಗ್ರಾಮ ಗೋವನಾಳದಲ್ಲಿನ ರೈತ ಹುತಾತ್ಮರ ಸ್ಮಾರಕಗಳಿಗೆ ಪೂಜೆ ಸಲ್ಲಿಸಿ ರೈತಪರ ಹೋರಾಟಗಾರರು ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಎದುರು ಪ್ರತಿಭಟನೆ ನಡೆಸುವ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.