ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಿಮಗೆ ಕೈ ಮುಗಿದು ಬೇಡಿಕೊಳ್ತೇವೆ, ಸಾಮಾಜಿಕ ಬಹಿಷ್ಕಾರ ತೆರವುಗೊಳಿಸಿ ನಮ್ಮನ್ನು ಮನುಷ್ಯರನ್ನಾಗಿ ಪರಿಗಣಿಸಿ.ಇದು ಚಳ್ಳಕೆರೆ ತಾಲೂಕು, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟಂದೇವರಕೋಟೆ ಗ್ರಾಮದ ಮಾದಿಗ ಸಮುದಾಯದವರು ಜಿಲ್ಲಾಡಳಿತದ ಮುಂಭಾಗ ಗೋಗರೆದ ಪರಿಯಿದು.
ವಾರದ ಹಿಂದೆ ಸುರಿಯುವ ಮಳೆಯಲ್ಲಿಯೇ ಪ್ರತಿಭಟನೆ ಮಾಡಿ ಹೋಗಿದ್ದ ಕುಟುಂಬಗಳು ಮತ್ತೆ ಮಂಗಳವಾರ ಆಗಮಿಸಿ ನೋವು ತೋಡಿಕೊಂಡರು. ಸವರ್ಣಿಯರು ವಿಧಿಸಿರುವ ಸಾಮಾಜಿಕ ಬಹಿಷ್ಕಾರವನ್ನು ತೆರವುಗೊಳಿಸುವುದೂ ಸೇರಿದಂತೆ ಹಲ್ಲೆಗೊಳಗಾದ ಸಂತ್ರಸ್ಥರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.ಗ್ರಾಮದಲ್ಲಿ ಶತಮಾನಗಳಿಂದಲೂ ಮಾದಿಗರನ್ನು ಅಲ್ಲಿನ ರೆಡ್ಡಿ, ನಾಯಕ, ಮಡಿವಾಳ, ಸವಿತಾ ಸಮಾಜ, ಕುಂಬಾರ, ಕಮ್ಮಾರ ಎಲ್ಲರೂ ಶೋಷಣೆ ಮಾಡಿಕೊಂಡು ಬಂದಿದ್ದಾರೆ. ಬಿಟ್ಟಿ ಚಾಕರಿ ಮಾಡುವುದನ್ನು ಬಿಟ್ಟ ಮೇಲೆ ಮಾದಿಗರ ಮೇಲೆ ಇವರ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ಸಮುದಾಯದ ಪ್ರಜ್ಞಾವಂತ ಯುವಕರು ಅಕ್ಷರ ಕಲಿತು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನಿಷ್ಟ ಆಚರಣೆಗಳಿಗೆ ತಡೆಯೊಡ್ಡಿದ್ದರು. ಇದರಿಂದ ಕುಪಿತರಾಗಿ ಮಾದಿಗರ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಗ್ರಾಮದಲ್ಲಿ ಕಲುಷಿತ ವಾತಾವರಣ ಮನೆಮಾಡಿದೆ. ಅಧಿಕಾರಿಗಳ ಮುಂದೆಯೂ ಅವರ ದರ್ಪ ನಿಂತಿಲ್ಲವೆಂದು ಜಿಲ್ಲಾಡಳಿತದ ಅಂಗಳದಲ್ಲಿ ನೋವುಗಳ ಹರಡಿದರು.
ಗ್ರಾಮದಲ್ಲಿ ಹಿಟ್ಟಿನ ಗಿರಣಿ, ಪಂಕ್ಚರ್ ಶಾಪ್, ಹೋಟೆಲ್, ದೇವಸ್ಥಾನಗಳಿಗೆ ಪ್ರವೇಶವಿಲ್ಲದಂತಾಗಿದೆ. ಇವುಗಳನ್ನು ಖಂಡಿಸಿದಾಗ ಕಾಲೋನಿಗೆ ನುಗ್ಗಿ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೇ ಹಲ್ಲೆ ಮಾಡುವ ಮೂಲಕ ಅನಾಗರೀಕರಂತೆ ವರ್ತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಹೇಗೆ ನಡೆದುಕೊಳ್ಳಬೇಕೋ ಆ ರೀತಿ ನಡೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗರಿಗೆ ಕೂಲಿ ಇಲ್ಲದಂತಾಗಿದೆ. ಇವರ ಬದುಕು ಬೀದಿಗೆ ಬಿದ್ದಿದೆ. ಆದ್ದರಿಂದ ಇವರಿಗೆ ಸರ್ಕಾರ ಉದ್ಯೋಗ ನೀಡಬೇಕು. ಹಲ್ಲೆ ನಡೆಯಲು ಕಾರಣರಾದವರ ಮೇಲೆ ಪರಶುರಾಂಪುರದಲ್ಲಿ ಪ್ರಕರಣ ದಾಖಲಾದಂತೆ ಈ ಕೂಡಲೇ ಆರೋಪಿಗಳ ದಸ್ತಗಿರಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಗ್ರಾಮದಲ್ಲಿ ಕಿರಾಣಿ ಅಂಗಡಿಗಳಲ್ಲಿ ವಾಣಿಜ್ಯ ವಹಿವಾಟಿಗೆ ಅವಕಾಶ ಕಲ್ಪಿಸಬೇಕು. ದೌರ್ಜನ್ಯಕ್ಕೆ ಒಳಗಾದ 40 ಮಾದಿಗ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಜಮೀನು, ಕೊಳವೆ ಬಾವಿ, ಸಿಂಧಿ ಹಸುಗಳನ್ನು ನೀಡಬೇಕು. ಗ್ರಾಮದಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಮಾದಿಗರಿಗೂ ಶುಭ ಸಮಾರಂಭಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ಸಂಚಾಲಕ ಟಿ. ವಿಜಯಕುಮಾರ್, ಬೂದಿಹಳ್ಳಿ ಹೊನ್ನೂರ ಸ್ವಾಮಿ, ನೆಲಗೇತನ ಹಟ್ಟಿ ನಾಗರಾಜ್, ಅಶೋಕ್, ನಾಗರಾಜ್, ರಾಜಣ್ಣ, ಸೋಮಶೇಖರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.