ಶಿಗ್ಗಾಂವಿ: ಪದವೀಧರರ ಸಮಸ್ಯೆ–ನನ್ನ ಸಮಸ್ಯೆ, ನಿಮ್ಮ ಧ್ವನಿ–ನನ್ನ ಧ್ವನಿ, ನಿಮ್ಮ ಭವಿಷ್ಯ–ನನ್ನ ಆದ್ಯತೆ’ ಎಂಬ ಘೋಷವಾಕ್ಯದೊಂದಿಗೆ ಪದವೀಧರರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ನಡೆಸಿದ್ದು, ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಧಾರವಾಡ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮನವಿ ಮಾಡಿದರು.ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಸಭೆಯಲ್ಲಿ ಅವರು ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ವಿವಿಧ ಸಂಘಟನೆಗಳ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದೇನೆ, ಹೀಗಾಗಿ ಜನಪರ ಕಾರ್ಯಗಳ ಮಾಡುವ ಮೂಲಕ ಪದವೀಧರರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಣಕ್ಕೆ ಇಳಿದ್ದೇನೆ ಎಂದರು.ನನೆಗುದಿಗೆ ಬಿದ್ದಿರುವ ಪದವೀಧರರ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರ ಕಾಣಬೇಕು, ಪದವೀಧರರ ಆಶೋತ್ತರಗಳಿಗೆ ಸ್ಪಂದಿಸಿ ಶಾಶ್ವತ ಪರಿಹಾರ ನೀಡುವ ಗುರಿ ನಮ್ಮದಾಗಿದೆ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇದ್ದ ಹುದ್ದೆಗಳ ನೇಮಕ ಮಾಡುವುದು, ಶಿಕ್ಷಕರ ಮೇಲಿರುವ ಅನಗತ್ಯ ಕೆಲಸದ ಹೊರೆ ಕಡಿಮೆ ಮಾಡುವುದು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುವುದು ನಮ್ಮ ಧ್ಯೇಯವಾಗಿದೆ ಎಂದರು.ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ, ಬಿಜೆಪಿ ಅಭ್ಯರ್ಥಿಗಳು ಈವರೆಗೂ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ, ಅವರ ಭರವಸೆಯ ಮಾತುಗಳಿಗೆ ಮರುಳಾಗಬೇಡಿರಿ, ಬಿಜೆಪಿ ತಂತ್ರ, ಕುತಂತ್ರಗಳು ಇನ್ನು ನಡೆಯಲಾರವು, ಸಂಕಟ+ನೂರು= ಸಂಕನೂರು ಅವರಿಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ವ್ಯಂಗವಾಡಿದ ಅವರು, ೫ ಕೋಟಿ ಅನುದಾನ ಪಟ್ಟಣದ ಕ್ರೀಡಾಂಗಣ ಅಭಿವೃದ್ಧಿಗೆ ನೀಡಿದ್ದೇನೆ, ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆಗೆ ೩೫೦ ಕೋಟಿ ಅನುದಾನ ನೀಡಿದೆ, ಭಾರತ್ ಜೋಡೋ ಸಂಘಟನೆಗಳಲ್ಲಿ ಪದವೀಧರರನ್ನು ಸೇರ್ಪಡಿಸಲಾಗುತ್ತಿದೆ, ಐತಿಹಾಸಿಕ ಬದಲಾವಣೆಯನ್ನು ಈ ಬಾರಿ ಪದವೀಧರ ಮತದಾರರು ಮಾಡಲಿದ್ದಾರೆ ಎಂಬ ಭರವಸೆ ನಮಗಿದೆ ಎಂದರು.ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಬಿಜೆಪಿಯವರು ಈ ಮೊದಲು ಪದವೀಧರರಿಗೆ ಕೊಟ್ಟ ಭರವಸೆಗಳು ಈಡೇರಿಲ್ಲ, ಈಗಾಗಲೇ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ, ಕ್ಷೇತ್ರದಲ್ಲಿ ಶಾಸಕ ಪಠಾಣ್ ಅವರು ಕಳೆದ ೨೦ ತಿಂಗಳಲ್ಲಿ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದಾರೆ, ಬಿಜೆಪಿಯ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿರಿ ಎಂದರು.ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಪದವೀಧರ ಚುನಾವಣೆಗೆ ಮೋಹನ್ ಲಿಂಬಿಕಾಯಿ ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ, ಪದವೀಧರರ ಹಿತಕ್ಕಾಗಿ ಸಮರ್ಪಿಸುವ ಸಂಕಲ್ಪದೊಂದಿಗೆ ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಅವರನ್ನು ಗೆಲ್ಲಿಸಬೇಕಿದೆ, ಜೊತೆಗೆ ಬೇಡ್ತಿ-ವರದಾ ನದಿ ಜೋಡಣೆ ವಿಚಾರವಾಗಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಿದರು.