ಎಚ್ಐವಿ ರೋಗಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿ

KannadaprabhaNewsNetwork |  
Published : Dec 02, 2025, 01:08 AM IST

ಸಾರಾಂಶ

ಜಿಲ್ಲೆಯಲ್ಲಿ ಎಚ್ಐವಿ ರೋಗಿಗಳಿಗಾಗಿ ಸೂಕ್ತವಾದ ವಸತಿ ಸೌಲಭ್ಯಗಳ ಕೊರತೆ ಇದ್ದು, ರೋಗಿಗಳಿಗೆ ವಸತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲು ಸರ್ಕಾರೇತರ ಸಂಸ್ಥೆಗಳು ನೆರವಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ಎಚ್ಐವಿ ರೋಗಿಗಳಿಗಾಗಿ ಸೂಕ್ತವಾದ ವಸತಿ ಸೌಲಭ್ಯಗಳ ಕೊರತೆ ಇದ್ದು, ರೋಗಿಗಳಿಗೆ ವಸತಿ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲು ಸರ್ಕಾರೇತರ ಸಂಸ್ಥೆಗಳು ನೆರವಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ನೀಡಿದರು.

ಸೋಮವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಎಚ್.ಐ.ವಿ. ರೋಗಿಗಳಿಗೆ ಸರ್ಕಾರವೇ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಅನೇಕ ವಿದೇಶಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ಪೂರಕವಾದ ಸೇವೆಗಳನ್ನು ನೀಡುತ್ತಿವೆ. ಅದೇ ರೀತಿ ನಮ್ಮಲ್ಲೂ ಏಡ್ಸ್ ರೋಗಿಗಳ ನೆರವಿಗಾಗಿ ಸರ್ಕಾರೇತರ ಸಂಸ್ಥೆಗಳು ಮುಂದೆ ಬಂದು ಸಹಕಾರ ನೀಡಬೇಕು ಎಂದರು.

ಕೋರ ಬಳಿಯಿರುವ ನಿರಾಶ್ರಿತ ಕೇಂದ್ರದಲ್ಲಿ ಏಡ್ಸ್ ರೋಗಿಯೊಬ್ಬರನ್ನು ದಾಖಲಿಸಲಾಗಿತ್ತು. ಇದು ಅಂಗವಿಕಲರು, ವೃದ್ಧರು ಇರುವ ನಿರಾಶ್ರಿತ ಕೇಂದ್ರವಾಗಿರುವುದರಿಂದ ಏಡ್ಸ್ ರೋಗಿಯನ್ನು ಇರಿಸಿಕೊಳ್ಳಲು ಆಗುವುದಿಲ್ಲವೆಂದು ಹೊರ ಕಳಿಸಲಾಗಿದೆ ಎಂದು ತಿಳಿಸಿದರು.

ಏಡ್ಸ್ ದಿನಚರಣೆ ಕೇವಲ ಆಚರಣೆ ಮಟ್ಟಕ್ಕೆ ಸೀಮಿತವಾಗಬಾರದು. ಎಚ್.ಐ.ವಿ ರೋಗಿಗಳಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕು ಇದೆ. ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಸಮಾಜ ಸೇವಾ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರೋಗಿಗಳಿಗೆ ಬೇಕಾದ ಸಮಯೋಚಿತ ಚಿಕಿತ್ಸೆ ಮತ್ತು ಸೌಲಭ್ಯಗಳು ದೊರಕುತ್ತವೆ ಎಂದರು.

ಎಚ್.ಐ.ವಿ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ವಿವಿಧ ಜಾಗೃತಿ ಕಾರ್ಯಕ್ರಮ, ಶಿಕ್ಷಣ ಕಾರ್ಯಾಗಾರ, ಯುವಕರಿಗೆ ತಿಳುವಳಿಕೆ ನೀಡುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿದಾಗ ಮಾತ್ರ ಎಚ್.ಐ.ವಿ ತಡೆಗಟ್ಟುವಿಕೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮೋಹನ್ ದಾಸ್ ಮಾತನಾಡಿ, ಜಿಲ್ಲೆಯಲ್ಲಿ ಏಡ್ಸ್ ಹರಡುವಿಕೆಯನ್ನು ತಡೆಯುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಅರಿವು ಕಾರ್ಯಕ್ರಮಗಳು ಹಾಗೂ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ನಗರದಲ್ಲಿ ಕೃಷಿ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಏಡ್ಸ್ ನಿಯಂತ್ರಣ ಕುರಿತ ಕರಪತ್ರಗಳನ್ನು ಹಂಚಿ, ಜಾನಪದ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಶೋಕ್, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

---------------

ಕೋಟ್‌..

ಏಡ್ಸ್ ಎಂಬುದು ಒಂದು ರೋಗವಷ್ಟೇ. ರೋಗವನ್ನು ದೂರವಿಡಬೇಕೆ ವಿನಃ ರೋಗಿಯನ್ನಲ್ಲ. ಆದ್ದರಿಂದ ಎಲ್ಲರೂ ಏಡ್ಸ್‌ ರೋಗಿಗಳನ್ನು ಸಮಾನವಾಗಿ ಕಾಣುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. - ಡಾ. ಚಂದ್ರಶೇಖರ್. ಡಿಎಚ್ಒ ತುಮಕೂರು

------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ
ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ