ಮಳೆ ಹಾನಿ ತೋಟಗಾರಿಕೆ ಬೆಳೆಗೆ ಸೂಕ್ತ ಪರಿಹಾರ ಒದಗಿಸಿ

KannadaprabhaNewsNetwork |  
Published : May 09, 2025, 12:41 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯನ್ನು ಗುರುವಾರ ನಡೆಸಲಾಯಿತು.

ಕೆ.ಸಿ ಹೊರಕೇರಪ್ಪ ಒತ್ತಾಯ । ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯನ್ನು ಗುರುವಾರ ಸಂಘದ ತಾಲೂಕು ಅಧ್ಯಕ್ಷ ಬಿ.ಒ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆ ಉದ್ದೇಶಿಸಿ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಬಾರಿ ಆಲಿಕಲ್ಲು ಮತ್ತು ಬಿರುಗಾಳಿ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಬಾಳೆ, ಪಪ್ಪಾಯಿ, ದಾಳಿಂಬೆ ಮುಂತಾದ ಬೆಳೆಗಳು ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸರ್ಕಾರ ಹಳೇ ಮಾರ್ಗ ಸೂಚಿಗಳನ್ನು ಬದಲಾಯಿಸಿ ಎಷ್ಟು ಬೆಳೆ ಹಾನಿ ಆಗಿರುತ್ತದೆಯೋ ಅಷ್ಟು ಮರ, ಗಿಡಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ವಿದ್ಯುತ್ ಖಾಸಗೀಕರಣ ಗೊಳ್ಳುತ್ತಿದ್ದು ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಸರ್ಕಾರ ಕೂಡಲೇ ರೈತರಿಗೆ ಹಳೆ ಪದ್ಧತಿಯಂತೆ ಅಕ್ರಮ ಸಕ್ರಮ ಯೋಜನೆ ಮುಖಾಂತರ ರೈತರ ಪಂಪ್‌ಸಟ್ ಗಳಿಗೆ ವಿದ್ಯುತ್ ಸರಬರಾಜು ಮತ್ತು ಪರಿವರ್ತಕ ಅಳವಡಿಸಬೇಕೆಂದು ಕೆಲವೇ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಉಗ್ರ ಹೋರಾಟ, ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.

ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು ಮಾತನಾಡಿ, ಬೆಳೆ ಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಾಗಲಿ ಸೂಕ್ತ ಸಮಯಕ್ಕೆ ಭೇಟಿ ನೀಡದೆ ನಿರ್ಲಕ್ಷ ವಹಿಸುತ್ತಿದ್ದಾರೆ. ಕಳೆದ ವರ್ಷ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವಿತರಿಸಿದ್ದ ತರಕಾರಿ ಬಿತ್ತನೆ ಬೀಜಗಳು, ತೊಗರಿ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಯಿಕಟ್ಟದೆ ರೈತರು ಬೆಳೆ ನಷ್ಟ ಅನುಭವಿಸಿ ಕಂಗಾಲಾಗಿದ್ದು ಈ ವರ್ಷ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮಿಕಾಂತ್ ಮಾತನಾಡಿ, ರಾಸಾಯನಿಕ ಗೊಬ್ಬರ ವಿತರಿಸುವ ಅಂಗಡಿಗಳಲ್ಲಿ ಗೊಬ್ಬರ, ಬಿತ್ತನೆ ಬೀಜ, ಔಷಧಿಗಳಿಗೆ ಹೆಚ್ಚಿನ ದರ ಪಡೆಯುತ್ತಿದ್ದು ಗೊಬ್ಬರ ವ್ಯಾಪಾರಿಗಳ ಅಂಗಡಿ ಮುಂಭಾಗ ಕೃಷಿ ಇಲಾಖೆಯ ದರಪಟ್ಟಿಯ ನಿಯಮದಂತೆ ಗೊಬ್ಬರ, ಔಷಧಿ, ಬಿತ್ತನೆ ಬೀಜಗಳ ಬೆಲೆ ಫಲಕಗಳನ್ನು ಅಳವಡಿಸಬೇಕು ಎಂದರು.

ತಾಲೂಕು ಅಧ್ಯಕ್ಷ ಬಿ.ಒ.ಶಿವಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಕೃಷಿ ತೋಟಗಾರಿಕೆ ಇಲಾಖೆಗಳಿಂದ ಕಳೆದ ಎರಡು ವರ್ಷಗಳಿಂದ ಟ್ರಾಕ್ಟರ್, ಮಿನಿ ಟ್ರಾಕ್ಟರ್, ಟಿಲ್ಲರ್, ಯಂತ್ರೋಪಕರಣಗಳ ಪರಿಕರಗಳು ಸರಬರಾಜು ಆಗುತ್ತಿಲ್ಲ. ಕೂಡಲೇ ಸರ್ಕಾರ ಪರಿಕರಗಳನ್ನು ಇಲಾಖೆಗಳಿಗೆ ಸರಬರಾಜು ಮಾಡಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಂ.ಆರ್.ಪುಟ್ಟಸ್ವಾಮಿ, ಬಿ.ಡಿ.ಶ್ರೀನಿವಾಸ್, ಗೌಸ್ ಪೀರ್, ಚಿಕ್ಕತಿಮ್ಮಯ್ಯ, ಮುಕುಂದಪ್ಪ, ಮರದಮುತ್ತು, ಎಚ್‌.ಎನ್.ಮೂರ್ತಪ್ಪ, ಬೋಚಾಪುರ ರಮೇಶ್, ಅನಸೂಯಮ್ಮ, ನಿತ್ಯಶ್ರೀ, ಉಮಾಪತಿ, ಮಲ್ಲೇಣು ನಾಗರಾಜು, ಹನುಮಂತಪ್ಪ, ಸಿದ್ದಯ್ಯ, ಜಗನ್ನಾಥ್, ಬ್ಯಾಡರಹಳ್ಳಿ ಶ್ರೀನಿವಾಸ್, ಸಿಎನ್ ಮಾಳಿಗೆ ಲೋಕೇಶ್, ಟಿ.ಮುನಿಸ್ವಾಮಿ, ಐನಹಳ್ಳಿ ರವೀಶ್ , ಕುಂದಲಗುರ ಜಗನ್ನಾಥ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ