ಐತಿಹಾಸಿಕ ಸಿಡಿ, ದಂಡಿನ ಮಾರಮ್ಮನ ಹಬ್ಬಕ್ಕೆ ಮೂಲ ಸೌಕರ್ಯ ಕಲ್ಪಿಸಿ

KannadaprabhaNewsNetwork | Updated : Feb 15 2024, 04:46 PM IST

ಸಾರಾಂಶ

ಐತಿಹಾಸಿಕ ದಂಡಿನ ಮಾರಮ್ಮನ ಹಾಗೂ ಸಿಡಿ ಹಬ್ಬದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವುದರಿಂದ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ಸಮಸ್ಯೆ ಕಾಡದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ಮಳವಳ್ಳಿ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಒಕ್ಕೂಲಿನಿಂದ ಆಗ್ರಹಿಸಿದ ಸದಸ್ಯರು.

ಕನ್ನಡ ಪ್ರಭ ವಾರ್ತೆ ಮಳವಳ್ಳಿಪಟ್ಟಣದ ಪುರಸಭೆ ಆಡಳಿತಾಧಿಕಾರಿ ಗೈರಿನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಸಿಡಿ ಮತ್ತು ದಂಡಿನ ಮಾರಮ್ಮನ ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಬಹುತೇಕ ಸದಸ್ಯರು ಆಗ್ರಹಿಸಿದರು.

ಪುರಸಭೆ ಸಭಾಂಗಣದಲ್ಲಿ ಫೆ.20ರ ದಂಡಿನ ಮಾರಮ್ಮನ ಹಾಗೂ ಫೆ.23 ಮತ್ತು 24ರ ಸಿಡಿ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ನಾಗೇಶ್, ನೂರುಲ್ಲಾ, ಎಂ.ಟಿ.ಪ್ರಶಾಂತ್, ರವಿ, ರಾಧಾ ನಾಗರಾಜು, ಎನ್.ಬಸವರಾಜು, ಟಿ.ನಂದಕುಮಾರ್, ಮಣಿ ನಾರಾಯಣ ಸೇರಿದಂತೆ ಹಲವರು ಮಾತನಾಡಿದರು.

ಐತಿಹಾಸಿಕ ದಂಡಿನ ಮಾರಮ್ಮನ ಹಾಗೂ ಸಿಡಿ ಹಬ್ಬದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವುದರಿಂದ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ಸಮಸ್ಯೆ ಕಾಡದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ಒಕ್ಕೂಲಿನಿಂದ ಆಗ್ರಹಿಸಿದರು.

ಹಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿವೆ. ಹಬ್ಬದ ವೇಳೆ ಲಕ್ಷಾಂತರ ಮಂದಿ ಬರುವುದರಿಂದ ವಾರ್ಡ್ ಗಳ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ತಕ್ಷಣವೇ ಕ್ರಮ ವಹಿಸಬೇಕು. ಜೊತೆಗೆ ಎಲ್ಲೆಡೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಈ ಸಂಬಂಧ ಮೇಸ್ತ್ರೀಗಳಿಗೆ ಸರಿಯಾದ ಸೂಚನೆ ಮಾಡಬೇಕು ಎಂದರು.

ಹಬ್ಬದ ಸಂದರ್ಭದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಅಲ್ಲದೇ ಸಿಡಿ ಬಂಡಿ ಸಾಗುವ ಪೇಟೆ ಬೀದಿಯ ಸೇರಿದಂತೆ ಅನೇಕ ಕಡೆ 24*7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದ ಗುಂಡಿಗಳಾಗಿವೆ. ಅವುಗಳನ್ನು ಮುಚ್ಚುವ ಕಾರ್ಯ ಮಾಡಬೇಕು. ಪಟ್ಟಣದ ರಸ್ತೆ ವಿಭಜಕಗಳ ದೀಪಗಳು ಹಾಗೂ ಎಲ್ಲೆಡೆಯ ಬೀದಿ ದೀಪಗಳ ಅಳವಡಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

22ನೇ ವಾರ್ಡ್ ನ ಸದಸ್ಯೆ ಇಂದ್ರಮ್ಮ ದೊಡ್ಡಯ್ಯ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಯುಜಿಡಿಯ ಅಸಮರ್ಪಕ ಕಾಮಗಾರಿಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಜನರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧ ಗುತ್ತಿಗೆದಾರರಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಈಗಾಗಲೇ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೇ, ಬೀದಿ ದೀಪಗಳ ಅಳವಡಿಕೆ ಟೆಂಡರ್ ಕರೆದಿದ್ದು, ಹಬ್ಬ ಆರಂಭವಾಗುವ ಮುನ್ನ ಹೊಸದಾಗಿ ದೀಪ ಹಾಕಲಾಗುವುದು. ಸ್ವಚ್ಛತೆ, ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಇಲಾಖಾವಾರು ಅಧಿಕಾರಿಗಳು ಎಲ್ಲ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲರ ಸಹಕಾರದಿಂದ ಹಬ್ಬದ ಯಶ್ವಸಿಗೆ ಮುಂದಾಗುತ್ತೇವೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿ ಮಾಹಿತಿ ನೀಡಿದರು.

Share this article