ಹಳಿಯಾಳ: ಪಟ್ಟಣದ ಜಿ ಪ್ಲಸ್ 2 ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಬಡಾವಣೆಗೆ ರಸ್ತೆ ನಿರ್ಮಿಸಿ ಕೊಡಬೇಕೆಂದು ಬಡಾವಣೆ ನಿವಾಸಿಗಳ ನಿಯೋಗ ತಾಲೂಕಾಡಳಿತ, ಪುರಸಭೆಗೆ ಮನವಿ ಸಲ್ಲಿಸಿತು.ಜಿ ಪ್ಲಸ್ 2 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ತಾಲೂಕು ಆಡಳಿತ ಸೌಧಕ್ಕೆ ತೆರಳಿದ ಬಡಾವಣೆ ನಿವಾಸಿಗಳು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರಿಗೆ ಮನವಿ ಸಲ್ಲಿಸಿ, ತಮ್ಮ ಅಳಲು ತೋಡಿಕೊಂಡರು.
ಖಾಲಿ ಮನೆಗಳನ್ನು ನೀಡಿ:
ನಂತರ ಬಡಾವಣೆ ನಿವಾಸಿಗಳ ನಿಯೋಗ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಬಡಾವಣೆಯಲ್ಲಿ ಜೀವಜಲದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ನೀರಿಗೆ ರಭಸ ಇಲ್ಲದೇ ಇರುವುದರಿಂದ ನೀರು ಮೇಲೇರುತ್ತಿಲ್ಲ. ಮನೆ ಮಂಜೂರಾಗಿದ್ದರೂ ಫಲಾನುಭವಿಗಳು ಬಂದು ಉಳಿಯದೇ ಇರುವುದರಿಂದ ಬಡಾವಣೆಯಲ್ಲಿ ಸಾಕಷ್ಟು ಮನೆಗಳು ಖಾಲಿಯಾಗಿವೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಬಡಾವಣೆಯ ಮೇಲ ಅಂತಸ್ತಿನ ನಿವಾಸಿಗಳಿಗೆ ಖಾಲಿಯಿರುವ ನೆಲಅಂತಸ್ತಿನ ಮನೆಗಳನ್ನು ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಅಹವಾಲು ಆಲಿಸಿದ ಮುಖ್ಯಾಧಿಕಾರಿ, ಶಾಸಕ ದೇಶಪಾಂಡೆ ವಿಶೇಷ ಪ್ರಯತ್ನಗಳಿಂದ ಜಿ-ಪ್ಲಸ್ 2 ಬಡಾವಣೆಯಲ್ಲಿ ಈ ವರೆಗೂ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಫಲಾನುಭವಿಗಳಿಗೆ ನೀಡಿದ ವಿಶೇಷ ರಿಯಾಯಿತಿ ಸೌಲಭ್ಯಗಳನ್ನು ತಿಳಿಸಿ, ಬಡಾವಣೆಯವರು ಆಪೇಕ್ಷಿತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಜಿ ಪ್ಲಸ್ 2 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪದ್ಮಾ ಜಕಾತಿ, ಮೆಹಬೂಬ ನದಾಫ, ವಿಲಿಯಂ ಕೆನಡಿ, ಅಲ್ಲಿಸಾಬ ಮುಲ್ಲಾ, ಸಂತೋಷ ಘಾಡಿ, ಜ್ಯೋತಿ ರೊಜಾರಿಯೋ ಇದ್ದರು.