ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಗಳ ಮೂಲಕ ಸಮಾಜದ ಮುಖ್ಯ ವಾಹಿನಿಯ ಬಗ್ಗೆ ಅರಿವು ಪಡೆಯುವ ಅವಕಾಶಗಳು ಹೇರಳವಾಗಿದೆ ಎಂದು ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್ ವಿ ಗಂಗಾಧರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಸಮೀಪದ ಚಿಕ್ಕ ಅಳುವಾರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ 2024-25 ರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣದ ಹೊರತಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಶಿಬಿರದ ಮೂಲಕ ದೊರಕಲಿದೆ. ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪರಿಸರ ಉಳಿಸುವಲ್ಲಿ ಯುವ ಜನತೆಯ ಪಾತ್ರ ವಿಷಯದ ಮೇಲೆ ಉಪನ್ಯಾಸ ನೀಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ ಎನ್ ಚಂದ್ರಮೋಹನ್, ಪರಿಸರವನ್ನು ತಮ್ಮ ಅವಿಭಾಜ್ಯ ಅಂಗವೆಂದು ಪರಿಗಣಿಸುವುದು ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಿದೆ.
ಜಲ ಮೂಲಗಳು ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಎಲ್ಲರ ಹೊಣೆಯಾಗಿದೆ ಎಂದರು.ನನ್ನ ಕಸ ನನ್ನದು ಅನ್ನುವ ಘೋಷವಾಕ್ಯದೊಂದಿಗೆ ತಮ್ಮ ಸುತ್ತಮುತ್ತ ಸ್ವಚ್ಛತೆಯ ಅರಿವು ಜಾಗೃತಿ ಇತರರಿಗೆ ಮೂಡಿಸುವಂತಾಗಬೇಕು. ಆ ಮೂಲಕ ಸ್ವಚ್ಛ ಪರಿಸರ ಕಾಣಲು ಸಾಧ್ಯ ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಸತೀಶ್ ಕಾಳೇಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದಲ್ಲಿ ಜೀವನದ ಪಾಠ ಕಲಿಯಲು ಸಾಧ್ಯ ಎಂದ ಅವರು ಶಿಬಿರಾರ್ಥಿಗಳಿಗೆ ಶುಭ ಕೋರಿದರು.ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಕೆ ಬಿ ದೇವರಾಜು ಮತ್ತು ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿದರು.
ಕಾರ್ಯಕ್ರಮ ಅಧಿಕಾರಿ ಜಿ ಜಯಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿಗಳಾದ ಕೆ ಪಿ ವಿಜಯ್ ಸಹ ಶಿಬಿರ ಅಧಿಕಾರಿಗಳಾದ ಭಾಸ್ಕರ್ ಸಿಎಂ ರಾಜೇಶ್ ಮತ್ತಿತರರು ಇದ್ದರು.ಒಂದು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಶ್ರಮದಾನ, ಜನ ಜಾಗೃತಿ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ತರಬೇತಿ, ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯಕ್ರಮ ಅಧಿಕಾರಿ ಜಯಣ್ಣ ಅವರು ತಿಳಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಾ ಪ್ರಕಾಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿ ಪಿ ಧರ್ಮ, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಈ ಸಂದರ್ಭ ಉಪಸ್ಥಿತರಿದ್ದರು.