ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಸಚಿವ ಎನ್. ಮಹೇಶ್ ಅವರು ಹೇಳಿದರು.ತಾಲೂಕಿನ ಕಾಡಂಚಿನ ಗ್ರಾಮವಾದ ಮೆಂದರೆ ಹಾಗೂ ಇಂಡಿಗನತ್ತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಕಳೆದ 70 ವರ್ಷಗಳಲ್ಲಿ ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಸರ್ಕಾರಗಳು ಆಡಳಿತ ನಡೆಸಿವೆ. ಆದರೇ ಈ ಗ್ರಾಮಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಇನ್ನೂ ಸಹ ಯಾಕೇ ನೀಡಿಲ್ಲ ಎಂಬುದು ಇಲ್ಲಿನ ಜನರ ಅಭಿಪ್ರಾಯ. ಹಾಗಾಗಿ ಈ ಪ್ರಶ್ನೆ ನನ್ನಲ್ಲು ಕೂಡ ಕಾಡಿದ್ದು, ಈ ಜನರು ಚುನಾವಣೆ ಬಹಿಷ್ಕಾರ ಮಾಡಿರುವುದು ಸರಿಯೇ ಆಗಿದೆ ಎಂದರು. ಇಂಡಿಗನತ್ತ, ಮೆಂದರೆ ಸೇರಿದಂತೆ ಇತರ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ನಾಗರೀಕ ಸರ್ಕಾರದ ಜವಾಬ್ದಾರಿ. ಆದಷ್ಟು ಬೇಗ ಈ ಗ್ರಾಮಕ್ಕೆ ಅರಣ್ಯ ಇಲಾಖೆ ಕಠಿಣ ಕಾನೂನುಗಳನ್ನು ಸಡಿಲ ಮಾಡುವುದು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಜವಾಬ್ದಾರಿ.
ಸುಸಜ್ಜಿತ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ಯಾವುದೇ ತೊಂದರೆ ಆಗದೆ ಯಾವ ರೀತಿ ಕೇಬಲ್ ತಂದು ಕ್ರಮವಹಿಸುತ್ತೀರೂ ಅದೇ ರೀತಿ ಇಲ್ಲಿನ ಜನರಿಗೂ ಸಹ ಸಕಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದೆ ಬರಲಿರುವ ತಾಲೂಕು, ಜಿಪಂ ಚುನಾವಣೆ ವೇಳೆವರೆಗೂ ಈ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡದ್ದಿದ್ದರೆ ಈ ಗ್ರಾಮಸ್ಥರು ಮುಂದಿನ ಚುನಾವಣೆ ಬಹಿಷ್ಕಾರ ಮಾಡುತ್ತಾರೆ. ಜೊತೆಗೆ ನಾನು ಕೂಡ ಗ್ರಾಮಸ್ಥರ ಜೊತೆ ಪಾಲ್ಗೊಳ್ಳುವೆ ಇದನ್ನು ಬರದಿಟ್ಟುಕೊಳ್ಳಿ ಎಂದು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರೆ, ಮುಖ್ಯಮಂತ್ರಿಗಳೇ ಎಂದು ಆಕ್ರೋಶ ಭರಿತವಾಗಿ ಹೇಳಿದರು.ಈ ಪ್ರಕರಣವನ್ನು ಉಲ್ಬಣ ಮಾಡದೇ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಂಡಿಗನತ್ತ ಅಮಾಯಾಕ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಜನಧ್ವನಿ ವೆಂಕಟೇಶ ಮಾತನಾಡಿ, ಮಹದೇಶ್ವರ ಬೆಟ್ಟದ ತಪಲಿನಲ್ಲಿ ವಾಸಿಸುತ್ತಿರುವ ಕಾರಯ್ಯ, ಬೀರಯ್ಯರಂತೆ ಇಲ್ಲಿನ ಸಮುದಾಯದಗಳು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದು, ಈ ಪ್ರಕರಣದಲ್ಲಿ ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಅಮಾಯಕರು ಬಲಿಪಶುಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ ಮುಗ್ದಜನರಿಗೆ ನೆಮ್ಮದಿ ಜೀವನ ಕಟ್ಟಿಕೊಡುವ ದಿಸೆಯಲ್ಲಿ ಮುಂದಾಗಬೇಕು ಎಂದರು.ಮಹಿಳೆಯನ್ನು ಸಂತೈಸಿದ ಜನಧ್ವನಿ ವೆಂಕಟೇಶ್:
ಗ್ರಾಮಕ್ಕೆ ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಜನಧ್ವನಿ ವೆಂಕಟೇಶ್ ಆಗಮಿಸಿದಂತೆ ಮಹಿಳೆಯೊರ್ವಳು ಓಡಿ ಬಂದು ಅಳುತ್ತಾ ನಮ್ಮ ಗ್ರಾಮದಲ್ಲಿ ಪ್ರಕರಣ ನಡೆದ ದಿನದಿಂದಲೂ ನಮ್ಮ ನೆರವಿಗೆ ನಿಂತಿದ್ದೀರಿ. ನಮ್ಮೆಲ್ಲರಿಗೆ ನೀವೇ ದಿಕ್ಕು. ನಾವು ನಿರಾಪರಾಧಿಗಳು. ನಮ್ಮನ್ನು ಈ ಪ್ರಕರಣಗಳಿಂದ ಮುಕ್ತಿಗೊಳಿಸಿ ನಮ್ಮ ಗ್ರಾಮದಲ್ಲಿ ಗಂಡ, ಮಕ್ಕಳ ಜೊತೆ ಇರಲು ಅನುಕೂಲ ಕಲ್ಪಿಸಿ ಎಂದು ಅಂಗಲಾಚಿದರು.ಕೇಶ ಮುಂಡನೆ ಮಾಡಿಸಿದ ಮಹಿಳೆ:
ಇಂಡಿಗನತ್ತ ಗ್ರಾಮದಲ್ಲಿ ಏ.26 ರಂದು ನಡೆದ ಮತಗಟ್ಟೆ ಗಲಾಟೆಯ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಹಿಳೆ ಮಹದೇವಮ್ಮ ನಾವು ತಂಬಡಿಗಳು ಹಾಗಾಗಿ ನಾವು ಹಾಗೆ ಮನೆಗೆ ನುಗುವುದಿಲ್ಲಾ. 21 ದಿನಗಳು ಜೈಲಿನಲ್ಲಿ ಇದ್ದು ಬಂದಿರುವುದರಿಂದ ಮೈಲಿಗೆ ಆಗಿದ್ದೇವೆ. ಆದರಿಂದ ಮಾದಪ್ಪನಿಗೆ ತಲೆ ಮುಡಿ ಕೊಟ್ಟಿದ್ದೇನೆ. ಪ್ರಕರಣದಲ್ಲಿ ನಾನು ನಿರಾಪರಾಧಿ ನಮ್ಮನ್ನು ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿ ಕರೆದುಕೊಂಡು ಹೋಗಿ ನಮ್ಮನ್ನು ಕಾರಾಗೃಹದ ಬಂಧನದಲ್ಲಿ ಇಟ್ಟಿದರು ಎಂದು ಮಹಿಳೆ ಮಾದೇವಮ್ಮ ಕನ್ನಡ ಪ್ರಭ ಪತ್ರಿಕೆ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಮುಖಂಡರಾದ ಮುರುಗೇಶ್, ಮಾದೇಶ್, ಇನ್ನಿತರರು ಉಪಸ್ಥಿತರಿದ್ದರು.