ಓದುಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : Mar 30, 2025 3:01 AM

ಸಾರಾಂಶ

ನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಡೀಸಿ, ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಪುಸ್ತಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಗ್ರಂಥಾಲಯದಲ್ಲಿಡಬೇಕು. ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಗ್ರಂಥಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದ್ಯ ಗ್ರಂಥಾಲಯದ ಒಳಗಡೆ ಮತ್ತು ಹೊರಗಡೆ ಅತ್ಯುತ್ತಮ ವಾತಾವರಣವಿದೆ. ಇದು ಹೀಗೆಯೇ ಮುಂದುವರೆಯಬೇಕು. ವಿದ್ಯಾರ್ಥಿಗಳಿಗೆ ತಕ್ಷಣ ಪುಸ್ತಕಗಳು ಲಭ್ಯವಾಗುವಂತೆ ವಿಷಯವಾರು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಗ್ರಂಥಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.ಗ್ರಂಥಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದಲು ಬರುತ್ತಾರೆ. ಹೀಗಾಗಿ ಗ್ರಂಥಾಲಯದ ಮೇಲಗಡೆ ಇನ್ನಷ್ಟು ಹೊಸದಾದ ಸಿಂಟೆಕ್ಸ್‌ ಕೂಡಿಸಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯಗಳ ನಿರ್ಮಾಣದ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಗುರಿ ಕಡೆ ಗಮನಹರಿಸಬೇಕು:

ಕಠಿಣ ಪ್ರರಿಶ್ರಮ ಹಾಗೂ ಏಕಾಗ್ರತೆಯಿಂದ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳು ಶ್ರದ್ಧೆಯಿಂದ ತಮ್ಮ ಹೆಚ್ಚಿನ ಅವಧಿಯಲ್ಲಿ ಗುರಿ ಸಾಧನೆಯ ಕಡೆ ಗಮನಹರಿಸಬೇಕು. ಛಲ ದಿಂದ ಗುರಿಯೆಡೆ ಮುನ್ನಡೆದರೆ ಅಸಾಧ್ಯವಾದುದು ಯಾವುದು ಇಲ್ಲ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುವುದಲ್ಲ. ಓದಿದ್ದನ್ನು ನಾಲ್ಕು ದಿಕ್ಕಿನಲ್ಲಿ ಅಭ್ಯಾಸ ನಡೆಸಬೇಕು. ಜೀವನದ ಮೌಲ್ಯಗಳನ್ನು ಬೆಳೆಸಿಕೊಂಡರೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು. ಯಾವ ವಿಷಯಗಳಲ್ಲಿ ಹೆಚ್ಚು ಬಲವಾಗಿದ್ದೀರಿ, ದುರ್ಬಲರಾಗಿದ್ದೀರಿ ಎಂಬ ಅಂಶಗಳನ್ನು ಪಟ್ಟಿ ಮಾಡಿಕೊಂಡು ಅಧ್ಯಯನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೋಹಪಾತ್ರ, ಎಸಿ ಗಜಾನನ ಬಾಳೆ, ಮುಖ್ಯ ಗ್ರಂಥಾಲಯಾಧಿಕಾರಿ ನಿರ್ಮಲ ಹೊಸೂರು, ಸಹ ಗ್ರಂಥಾಪಾಲಕರಾದ ರಾಘವೇಂದ್ರ, ಗ್ರಂಥಾ ಸಹಾಯಕರಾದ ಮರಿಯಪ್ಪ, ಗ್ರಂಥಾ ಸಹವರ್ತಿ ಪಾಂಡುರಂಗ ಸೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Share this article