ಚಿತ್ರದುರ್ಗ: ಅಧರ್ಮ, ಅನೀತಿ, ಅರಾಜಕತೆ, ಅತ್ಯಾಚಾರಗಳು ಭೂಮಿಯ ಮೇಲೆ ಹೆಚ್ಚಾದಾಗ ದೇವರು ಅವತಾರ ಎತ್ತಿ, ಇವುಗಳಿಗೆ ಅಂತ್ಯಹಾಡಿ, ಧರ್ಮ ರಕ್ಷಣೆ ಮಾಡುತ್ತಾನೆ ಎಂದು ಹಿಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅಗ್ನಿಬನ್ನಿರಾಯರು ಸಹ ಧರ್ಮ ರಕ್ಷಣೆಗಾಗಿ ಜನಿಸಿದವರು ಎಂದು ಉಪವಿಭಾಗಾಧಿಕಾರಿ ಮಹಿಬೂಬ್ ಜಿಲಾನ್ ತಿಳಿಸಿದರು.
ವೇದಗಳು ಹಾಗೂ 18 ಪುರಾಣಗಳನ್ನು ಓದಿದಾಗ, ನಮಗೆ ದೇವರ ಅವತಾರ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತದೆ. ದೇವಿಪುರಾಣ, ಶಿವಪುರಾಣ, ವಿಷ್ಣುಪುರಾಣಗಳಂತೆ, ಅಗ್ನಿಬನ್ನಿರಾಯ ಪುರಾಣವು ಅತಿ ಮುಖ್ಯವಾಗಿದೆ. ಅರಾಜಕತೆಯನ್ನು ಉಂಟುಮಾಡುವ ರಾಕ್ಷಸರ ವಧೆ ಮಾಡಿ ಅಗ್ನಿಬನ್ನಿರಾಯರು ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಿದರು ಎಂದು ಹೇಳಿದರು.
ಉಪನ್ಯಾಸಕ ಜಿ.ಎನ್.ಯಶೋಧರ್ ಮಾತನಾಡಿ, ಅಗ್ನಿವಂಶ ಕ್ಷತ್ರಿಯರ ಕುಲದೈವ ಅಥವಾ ಮೂಲಪುರುಷ ಎಂದು ಅಗ್ನಿಬನ್ನಿರಾಯರನ್ನು ಪೂಜಿಸಲಾಗುತ್ತದೆ. ಶಿವನ ಮೂರನೆ ಕಣ್ಣಿನಿಂದ ಜನಿಸಿದ ಅಗ್ನಿಬನ್ನಿರಾಯರು ಭೂ ಲೋಕದಲ್ಲಿನ ಅರಾಜಕತೆ ಕೊನೆಗಾಣಿಸಿದರು. ಇಂದ್ರನ ಮಗಳು ಮಂತ್ರಮಲೆಯನ್ನು ಮದುವೆಯಾದ ಅಗ್ನಿಬನ್ನಿರಾಯರ ಮುಂದಿನ ಸಂತತಿಯೇ ಅಗ್ನಿವಂಶ ಕ್ಷತ್ರಿಯರಾಗಿದ್ದಾರೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಇವರನ್ನು ತಿಗಳ ಜನಾಂಗದವರು ಎಂದು ಸಹ ಕರೆಯಲಾಗುತ್ತದೆ ಎಂದು ತಿಳಿಸಿದರು.ತುಮಕೂರು, ಮಧುಗಿರಿ, ಕೋಲಾರ, ಮುಳಬಾಗಿಲು, ಬೆಂಗಳೂರು ನಗರದಲ್ಲಿ ತಿಗಳರ ಜನಸಂಖ್ಯೆ ಹೆಚ್ಚಾಗಿದೆ. ಬುಡಕಟ್ಟು ಸಂಪ್ರದಾಯಗಳನ್ನು ಹೊಂದಿರುವ ಇವರ ಮೂಲ ತಮಿಳುನಾಡು. ಮೈಸೂರು ರಾಜ್ಯದ ಆಡಳಿತ ನಡೆಸುತ್ತಿದ್ದ ಹೈದರಾಲಿಯು, ತಮಿಳುನಾಡಿನಿಂದ ಕೃಷಿ ಹಾಗೂ ತೊಟಗಾರಿಕೆಯಲ್ಲಿ ಅನುಭವ ಹೊಂದಿದ್ದ ತಿಗಳರನ್ನು ಕರೆತಂದು ಬೆಂಗಳೂರಿನಲ್ಲಿ ಲಾಲ್‍ಬಾಗ್ ಉದ್ಯಾನವನ್ನು ನಿರ್ಮಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕರಗ ಉತ್ಸವವು ತಿಗಳರ ಸಾಂಸ್ಕೃತಿಕ ವೈವಿದ್ಯತೆಯನ್ನು ತೋರಿಸುತ್ತದೆ ಎಂದರು.
ನಗರಸಭೆ ಸದಸ್ಯ ಭಾಷಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಪೌರಾಯುಕ್ತೆ ಎಂ.ರೇಣುಕಾ, ಜಿ.ಪಂ.ಮಾಜಿ ಸದಸ್ಯ ಪಾಪಣ್ಣ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.