ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಿ

KannadaprabhaNewsNetwork | Published : Oct 21, 2024 12:40 AM

ಸಾರಾಂಶ

ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಹಾಸ್ಟೆಲ್ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಎಸ್.ಎಫ್.ಐ ನೇತೃತ್ವದಲ್ಲಿ ಬಾಲಕಿಯರ ಪ್ರತಿಭಟನೆ । ನಿಲಯ ಪಾಲಕರ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಹಾಸ್ಟೆಲ್ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ನಗರದ ಹಮಾಲರ ಕಾಲನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಿಲಯದ ವಾರ್ಡನ್ ತಾರತಮ್ಯ ಮಾಡುತ್ತಿದ್ದಾರೆ. ಸರಿಯಾಗಿ ಆಹಾರ ವಿತರಣೆ ಆಗುತ್ತಿಲ್ಲ. ಮೂಲಭೂತ ಸೌಲಭ್ಯ ನೀಡುತ್ತಿಲ್ಲ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ವಿದ್ಯಾರ್ಥಿನಿಯರ ವಿರುದ್ಧ ಪಾಲಕರಿಗೆ ಇಲ್ಲ ಸಲ್ಲದ ದೂರು ನೀಡುತ್ತಾರೆ ಎಂದು ದೂರಿದರು.

ವಸತಿ ನಿಲಯದಲ್ಲಿ ೨೦೦ ವಿದ್ಯಾರ್ಥಿನಿಯರು ಇರಲು ಅವಕಾಶ ಇದೆ. ಆದರೆ ಇಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. 200 ಜನ ಇರಬೇಕಾದ ವಸತಿ ನಿಲಯದಲ್ಲಿ ೩೫೦ ಜನ ವಿದ್ಯಾರ್ಥಿನಿಯರಿದ್ದಾರೆ. ಇದರಿಂದ ವಸತಿಗೆ ತೊಂದರೆ ಆಗುತ್ತಿದೆ. ಅಭ್ಯಾಸ ಮಾಡಲು ಸಹ ಆಗುವುದಿಲ್ಲ. ಜಾಗದ ಕೊರತೆ ಸಹ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ದಿನಬಳಕೆ ವಸ್ತುಗಳ ಕಿಟ್ ನೀಡಿಲ್ಲ. ಹಾಸ್ಟೆಲ್‌ನಲ್ಲಿ ಸಿಸಿಟಿವಿ ಅಳವಡಿಕೆಯಾಗಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ವಾರ್ಡನ್ ನಿರ್ಲಕ್ಷ್ಯ ಹಾಗೂ ತಾರತಮ್ಯದಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಕೂಡಲೇ ವಾರ್ಡನ್ ಬದಲಾಯಿಸುವಂತೆ ಒತ್ತಾಯಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ವಾರ್ಡನ ಗೀತಾ, ನಾನು ತಾರತಮ್ಯ ಮಾಡುತ್ತಿಲ್ಲ. ಯಾವ ವಿದ್ಯಾರ್ಥಿನಿ ಅಡುಗೆ ಕೋಣೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ, ಅವರಿಗೆ ಕೀ ನೀಡಿದ್ದೇನೆ. ಇಲ್ಲಿ ೨೮೦ ವಿದ್ಯಾರ್ಥಿನಿಯರು ಇರಬೇಕಾಗಿತ್ತು. ಆದರೆ ೩೨೦ ವಿದ್ಯಾರ್ಥಿನಿಯರಿದ್ದಾರೆ. ಹೆಚ್ಚುವರಿ ಕೊಠಡಿಗಾಗಿ ಕಟ್ಟಡ ನೋಡುತ್ತಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿನಿಯರು ಹಾಸ್ಟೆಲ್ ಸುಧಾರಣೆಗೆ ಪಟ್ಟು ಹಿಡಿದ ಹಿನ್ನೆಲೆ ತಕ್ಷಣ ವಿದ್ಯಾರ್ಥಿನಿಯರಿಗೆ ದಿನಬಳಕೆ ಕಿಟ್ ನೀಡಲಾಗಿದ್ದು. ವಿದ್ಯಾರ್ಥಿನಿಯರಿಗಾಗಿ ಸುಸಜ್ಜಿತ ಕಟ್ಟಡ ಪರಿಶೀಲಿಸಿ ಕೆಲವು ವಿದ್ಯಾರ್ಥಿನಿಯರು ಆ ಕಟ್ಟಡಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು.

ಎಸ್.ಎಫ್.ಐ ಸಂಘಟನೆಯವರು, ವಸತಿ ನಿಲಯದ ವಿದ್ಯಾರ್ಥಿನಿಯರಿದ್ದರು.

Share this article