ದೊಡ್ಡಬಳ್ಳಾಪುರ: ಆರ್.ಎಲ್. ಜಾಲಪ್ಪನವರು ನೇರನಡೆ ಮತ್ತು ನಿಷ್ಠುರ ವ್ಯಕ್ತಿತ್ವದಿಂದಲೇ ಹೆಸರಾದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ ಹೇಳಿದರು.
ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ. ರಾಜೇಂದ್ರ ಮಾತನಾಡಿ, ಜಾಲಪ್ಪ ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿದೆ. ಮುಖ್ಯವಾಗಿ ಮಹಿಳಾ ಉದ್ಯೋಗಿಗಳಿಗೆ ಆಸರೆಯಾಗಿದೆ. ಶೈಕ್ಷಣಿಕವಾಗಿಯೂ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ ಅವರು, ನೇರ, ನಿಷ್ಠುರ ನಡೆಯಿಂದ ಖ್ಯಾತಿ ಗಳಿಸಿದರು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 80ರ ದಶಕದಲ್ಲಿ ವಿಫಲ ತೆರೆದ ಬಾವಿಗಳ ರೈತರ ಸಾಲಮನ್ನಾ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಪ್ರತಿಭಾ ಪುರಸ್ಕಾರ: ಇದೇ ವೇಳೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರ್.ಎಲ್. ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಬಾಕ್ಸ್.......
ಜಾಲಪ್ಪ ಹುಟ್ಟುಹಬ್ಬದ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಸ್ಟಿಟ್ಯೂಷನ್ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣುಗಳನ್ನು ವಿತರಿಸಲಾಯಿತು. ತೂಬಗೆರೆಯ ಆರ್.ಎಲ್.ಜಾಲಪ್ಪ ವೃದ್ದಾಶ್ರಮದಲ್ಲಿನ ಆಶ್ರಿತರಿಗೆ ಸವಲತ್ತುಗಳ ವಿತರಣೆ ನಡೆಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆದವು. ಜಾಲಪ್ಪ ಸ್ಮೃತಿವನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಹಿ ಹಂಚಿಕೆ ನಡೆಯಿತು.
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ದಿವಂಗತ ಜಾಲಪ್ಪ ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.