ಕಳೆದೊಂದು ದಶಕದಲ್ಲಿ ದೇಶದಲ್ಲಿ ಸ್ಥಾಪನೆಯಾಗಿರುವ 2.3 ಲಕ್ಷ ಸ್ಟಾರ್ಟಪ್‌ಗಳಿಂದ 25 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದೊಂದು ದಶಕದಲ್ಲಿ ದೇಶದಲ್ಲಿ ಸ್ಥಾಪನೆಯಾಗಿರುವ 2.3 ಲಕ್ಷ ಸ್ಟಾರ್ಟಪ್‌ಗಳಿಂದ 25 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರೀಯಲ್ ರಿಸರ್ಚ್ (ಸಿಎಸ್‌ಐಆರ್) ಸಂಸ್ಥೆ ನಗರದಲ್ಲಿ ಆಯೋಜಿಸಿರುವ 2 ದಿನಗಳ ‘ರೈಸ್ ಕಾನ್‌ಕ್ಲೇವ್ 2026’ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಭಾರತದ ಸ್ಟಾರ್ಟ್‌ಅಪ್ ವ್ಯವಸ್ಥೆಯು ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ಸುಮಾರು 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿ ಹೊರಹೊಮ್ಮಿದೆ ಎಂದರು.
2047ರ ವೇಳೆಗೆ ವಿಕಸಿತ ಭಾರತ ಗುರು ಸಾಧಿಸಲು ಆವಿಷ್ಕಾರ ಮತ್ತು ಉದ್ಯಮಶೀಲತೆ ಆಧಾರಿತ ಬೆಳವಣಿಗೆ ಎಂಬ ವಿಷಯದ ಮೇಲೆ ಈ ಸಮಾವೇಶವನ್ನು ಆಯೋಜಿಸಲಾಗಿದೆ. 2014ರಲ್ಲಿ ದೇಶದಲ್ಲಿ 350 ರಿಂದ 400 ರಷ್ಟಿದ್ದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಇಂದು ಸುಮಾರು 2.3 ಲಕ್ಷಕ್ಕೆ ತಲುಪಿದೆ. ಈ ಮೂಲಕ ಭಾರತವು ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದರು.ಉದ್ಯಮಶೀಲತೆ ಎಂಬುದು ಕೇವಲ ಬೆಂಗಳೂರು, ಹೈದರಾಬಾದ್, ದೆಹಲಿಯಂತಹ ನಗರಗಳಿಗೆ ಸೀಮಿತವಾಗಿಲ್ಲ. ಭಾರತದ ಅರ್ಧಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ಈಗ ದೇಶದ 2 ಮತ್ತು 3ನೇ ಹಂತದ ನಗರಗಳಲ್ಲಿ ಹುಟ್ಟಿಕೊಳ್ಳುತ್ತಿವೆ. ಇನ್ನು ಕಂಪನಿಗಳು ಕೇವಲ ಮಾಹಿತಿ ತಂತ್ರಜ್ಞಾನಕ್ಕೆ ಸೀಮಿತವಾಗಿರದೆ ಕೃಷಿ, ಆಹಾರ ಸಂಸ್ಕರಣೆ, ಬಯೋಟೆಕ್ನಾಲಜಿ, ಆಳ ಸಮುದ್ರದ ಪರಿಶೋಧನೆಯಂತಹ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಿದೆ ಎಂದು ಸಚಿವರು ನುಡಿದರು.
ಭಾರತದ ಬಾಹ್ಯಾಕಾಶ ಆರ್ಥಿಕತೆಯ ಗಾತ್ರ ಈಗ 9 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ಮುಂದಿನ 8-10 ವರ್ಷಗಳಲ್ಲಿ 40-45 ಬಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ. ಖಾಸಗಿ ವಲಯದ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಸರ್ಕಾರವು 1 ಲಕ್ಷ ಕೋಟಿ ರು.ಯ ‘ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರ’ನಿಧಿಯನ್ನು ಸ್ಥಾಪಿಸಿದೆ ಎಂದು ಸಚಿವರು ತಿಳಿಸಿದರು.ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾತನಾಡಿ, ಚಂದ್ರನ ಮೇಲೆ ಲ್ಯಾಂಡರ್‌ಗಳು 14 ದಿನಗಳ ಬದಲಿಗೆ 100 ರಿಂದ 200 ದಿನಗಳ ಕಾಲ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ‘ರೇಡಿಯೊಐಸೋಟೋಪ್ ಹೀಟರ್ ಯುನಿಟ್’ ಅಭಿವೃದ್ಧಿಪಡಿಸಲು ಇಸ್ರೋ ಮತ್ತು ಪರಮಾಣು ಇಂಧನ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.