ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್) ಪ್ಯಾಕೇಜ್ 1 ಯೋಜನೆಯು ತುಮಕೂರು ರಸ್ತೆಯ ಮಾದಾವರದಿಂದ ಬಳ್ಳಾರಿ ರಸ್ತೆಯವರೆಗೆ (ವಿಮಾನ ನಿಲ್ದಾಣದ ಹತ್ತಿರ) ಸಾಗುವ 21 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಸಂಸ್ಥೆಗೆ (ಎಸ್‌ಎನ್‌ಸಿ) ಅಧಿಕೃತ ಒಪ್ಪಿಗೆ ಪತ್ರ ನೀಡಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.ತುಮಕೂರು ರಸ್ತೆಯ ಮಾದಾವರದಿಂದ (ಬಿಐಇಸಿ) ಏರ್‌ಪೋರ್ಟ್ ಸಮೀಪದ ಬಳ್ಳಾರಿ ರಸ್ತೆವರೆಗೆ 21 ಕಿ.ಮೀ. ಉದ್ದದ 8 ಪಥ ನಿರ್ಮಾಣ ಸಂಬಂಧಿತ ಟೆಂಡರ್ ಪ್ಯಾಕೇಜ್ ಇದಾಗಿದೆ. ಬಿಡಿಎ ಈ ಬೃಹತ್ ಕಾಮಗಾರಿಗೆ ಬರೋಬ್ಬರಿ 3348.05 ಕೋಟಿ ರು. ಮೊತ್ತ ಅಂದಾಜಿಸಿತ್ತು.
ಕಳೆದ ಏಪ್ರಿಲ್‌ನಲ್ಲಿ ಬಿಬಿಸಿ ಪ್ಯಾಕೇಜ್1ಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಸಲ್ಲಿಕೆಗೆ ಮೇ 4 ಕೊನೆ ದಿನವಾಗಿದ್ದು, ತಾಂತ್ರಿಕ ಬಿಡ್ ಮೇ 6ರಂದು ಹಾಗೂ ಹಣಕಾಸು ಬಿಡ್ ಮೇ 11ರಂದು ತೆರೆದಿತ್ತು. ಈ ಯೋಜನೆಯನ್ನು ''''''''''''''''ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ'''''''''''''''' ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ. ರಸ್ತೆ ನಿರ್ಮಾಣದ ಬಳಿಕ 10 ವರ್ಷಗಳ ಕಾಲ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಗುತ್ತಿಗೆದಾರ ಸಂಸ್ಥೆಯೇ ನೋಡಿಕೊಳ್ಳಬೇಕಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು 36 ತಿಂಗಳ ಕಾಲಾವಕಾಶ ನೀಡಲಾಗಿದೆ.ಈ ಕುರಿತು ಶನಿವಾರ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬೆಂಗಳೂರು ಬಿಜಿನೆಸ್ ಕಾರಿಡಾರ್ ಅಧ್ಯಕ್ಷ ಎಲ್.ಕೆ.ಅತೀಕ್ ಅವರು, ಪಿಆರ್‌ಆರ್1 ಪ್ಯಾಕೇಜ್1ರಲ್ಲಿ 21 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ಟೆಂಡರನ್ನು ಎಸ್‌ಎನ್‌ಸಿ ಸಂಸ್ಥೆಗೆ ವಹಿಸಲಾಗಿದ್ದು ಸ್ವೀಕಾರ ಪತ್ರ ನೀಡಲಾಗಿದೆ. ಬಿಐಇಸಿ ಸಮೀಪದ ಮಾದಾವರದಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದಿದ್ದಾರೆ.