ರೈತರಿಗೆ ₹ 25000 ಪರಿಹಾರ ನೀಡಿ, ಇಲ್ಲವೇ ದಿವಾಳಿ ಆಗಿದ್ದೇವೆಂದು ಒಪ್ಪಿಕೊಳ್ಳಿ

KannadaprabhaNewsNetwork |  
Published : Oct 16, 2026, 02:00 AM IST
ಛಲವಾದಿ ನಾರಾಯಣಸ್ವಾಮಿ | Kannada Prabha

ಸಾರಾಂಶ

ರಾಜ್ಯದಲ್ಲಿ ಬರದಿಂದ ಶೇ. 82ರಷ್ಟು ಬೆಳೆ ಹಾನಿಯಾಗಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಬರದಿಂದ ಶೇ. 82ರಷ್ಟು ಬೆಳೆ ಹಾನಿಯಾಗಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸರ್ಕಾರ ₹2,500 ಪರಿಹಾರ ಘೋಷಿಸಿ ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಸರ್ಕಾರಕ್ಕೆ ಹಣವಿಲ್ಲದಿದ್ದರೆ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಲಿ ಎಂದು ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ₹25 ಸಾವಿರ ಪರಿಹಾರ ನೀಡಬೇಕು. ಕೇಂದ್ರದ ಎನ್‌ಡಿಆರ್‌ಎಫ್ ನೆರವಿನ ನಿರೀಕ್ಷೆಯಲ್ಲಿ ಕಾಲಹರಣ ಮಾಡದೆ, ಮೊದಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಪರಿಹಾರ ಬಿಡುಗಡೆ ಮಾಡಬೇಕು. ಬಳಿಕ ಕೇಂದ್ರದ ನೆರವಿಗೆ ಒತ್ತಾಯಿಸಲು ಬಿಜೆಪಿ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಸಮಿತಿ ರಚಿಸಿ ಚರ್ಚೆಗೆ ಮುಂದಾಗಿದೆ. ಸಮಿತಿಯ ವರದಿ ಆಧರಿಸಿ ರೈತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಹೋರಾಟದ ಹೆಸರಿನಲ್ಲಿ ರಾಜಕೀಯ ನಾಯಕರ ಕುಟುಂಬದವರನ್ನು ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ ಎಂದು ಹೇಳಿದರು.

ಇದೇ ವೇಳೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸಿ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯ. ಇದೇ ವಿಚಾರವನ್ನು ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿದ್ದರು. ಈಗ ಚುನಾವಣಾ ಆಯೋಗ ಕ್ರಮಕೈಗೊಂಡಾಗ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ತಮ್ಮ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಸಲು ಬಂದಿದ್ದರು ಎಂದು ಹೇಳಿರುವ ಕುರಿತು ಸ್ಪಷ್ಟನೆ ನೀಡಬೇಕು. ಇಂತಹ ಘಟನೆಗಳ ಕುರಿತು ಜನರಿಗೆ ಸತ್ಯ ತಿಳಿಸಲಿ ಎಂದು ಡಿ.ಕೆ. ಶಿವಕುಮಾರ ಅವರ ವಿರುದ್ಧ ಹರಿಹಾಯ್ದರು.

ಈ ವೇಳೆ ಮುಖಂಡರಾದ ಮಹೇಂದ್ರ ಕೌತಾಳ, ಮಂಜುನಾಥ ಕಾಟ್ಕರ್, ವಸಂತ ನಾಡಜೋಶಿ, ಸುಭಾಷ್ ಅಂಕಲಕೋಟಿ, ಮಂಜುನಾಥ ಕೊಂಡಪಲ್ಲಿ, ರಾಜು ಕೋರ್ಯಾನಮಠ ಇದ್ದರು.

ಸಿಎಂ ತಮ್ಮ ಹೇಳಿಕೆ ಸ್ಪಷ್ಟಪಡಿಸಲಿ

ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಎರಡು ಮದುವೆಯಾಗಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಅಸಮಂಜಸವಾಗಿದೆ. ಈ ರೀತಿ ಮಾತನಾಡುವುದು ಶಾಸಕರ ಘನತೆಗೆ ಧಕ್ಕೆ ತರುವ ಜತೆಗೆ ಜನರಲ್ಲಿ ಅನುಮಾನ ಮೂಡಿಸುತ್ತದೆ. ಹೇಳಿಕೆಗೆ ಸಂಬಂಧಿಸಿದಂತೆ ಯಾರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿ ಎಂದರು. ಸ್ವಾಮೀಜಿಗಳು ತಮ್ಮ ರಾಯಭಾರಿಗಳಾಗಿ ಕೆಲಸ ಮಾಡಿದರೆ ಮೋಕ್ಷ, ಪುಣ್ಯ ಸಿಗುತ್ತದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯೂ ಖಂಡನೀಯ. ಧಾರ್ಮಿಕ ಗುರುಗಳು ರಾಜಕೀಯ ಏಜೆಂಟರಲ್ಲ. ಸಮಾಜವನ್ನು ಒಗ್ಗೂಡಿಸಬೇಕಾದವರು ವಿಭಜನೆಗೆ ಕಾರಣವಾಗುವ ಹೇಳಿಕೆ ನೀಡಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.15ರ ವರೆಗೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಅಧ್ಯಕ್ಷ ಮಾಧವರೆಡ್ಡಿ ಆಗ್ರಹ
ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅಸ್ತಂಗತ