ಎರಡು ದಿನ ಪೂರೈಸಿದ ಕಬ್ಬು ಬೆಳಗಾರರ ಪಾದಯಾತ್ರೆ

KannadaprabhaNewsNetwork |  
Published : Oct 16, 2026, 02:00 AM IST
ರರರರ | Kannada Prabha

ಸಾರಾಂಶ

ಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಳ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಗುರುವಾರ ಎರಡನೇ ದಿನ ಪೂರೈಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ/ಬೆಂಗಳೂರುಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಳ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ಗುರುವಾರ ಎರಡನೇ ದಿನ ಪೂರೈಸಿತು.ಸುಮಾರು 130 ಕಿ.ಮೀ. ದೂರದ ಪಾದಯಾತ್ರೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್‌ನಿಂದ ಬುಧವಾರ ಸಂಜೆ ಆರಂಭಗೊಂಡಿತ್ತು. ಮೊದಲ ದಿನ ಸುಮಾರು 30 ಕಿ.ಮೀ. ದೂರ ಕ್ರಮಿಸಿದ ರೈತರು ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಸಮೀಪದ ಮುಕ್ತಿಮಠದಲ್ಲಿ ವಾಸ್ತವ್ಯ ಹೂಡಿದ್ದರು.

ಗುರುವಾರ ಬೆಳಗ್ಗೆ ಮುಕ್ತಿಮಠದಿಂದ ಪಾದಯಾತ್ರೆ ಆರಂಭಿಸಿದ ರೈತರು, ಕಾಕತಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಸುವರ್ಣ ವಿಧಾನಸೌಧದ ಬಳಿ ವಾಸ್ಯವ್ಯ ಹೂಡಿದ್ದಾರೆ. ಪಾದಯಾತ್ರೆ ವೇಳೆ ರೈತ ಮುಖಂಡ ಪ್ರೇಮ್‌ ಚೌಗಲಾ ಎಂಬುವರು ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿರು ಬಿಸಿಲಿನಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರೈತರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಹೆಜ್ಜೆ ಹಾಕುತ್ತಿದ್ದು, ಪ್ರತಿದಿನ ಸುಮಾರು 20 ಕಿ.ಮೀ.ಕ್ರಮಿಸುವ ಉದ್ದೇಶ ಹೊಂದಿದ್ದಾರೆ.

ಇದೇ ವೇಳೆ, ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ರೈತರು ಕೆಲಕಾಲ ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಧಾರವಾಡದ ಯರಿಕೊಪ್ಪ ಬಳಿ ರೈತರು ಹೆದ್ದಾರಿ ಪಕ್ಕದ ಸರ್ವೀಸ್‌ ರಸ್ತೆಯಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದರು. ಬೆಳಗಾವಿಯಿಂದ ಬರುತ್ತಿರುವ ಪಾದಯಾತ್ರೆ ಸೇರಿಕೊಳ್ಳಲು ಕಾಯುತ್ತಿದ್ದಾರೆ. ಈ ಮಧ್ಯೆ, ಮೈಸೂರಿನ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕಬ್ಬಿನ ಸೋಗಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೀದರ್‌ನ ಹುಮನಾಬಾದ್ ನಲ್ಲಿ ಪಟ್ಟಣದ ಹೊರವಲಯದ ಹಳೆ ಆರ್.ಟಿ.ಓ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತರು, ಕೆಲ ಸಮಯ ಮುಂಬೈ-ಹೈದ್ರಾಬಾದ್‌ ರಾಷ್ಟ್ರೀಯ ಹೆದ್ದಾರಿ ತಡೆದು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

====

ಸಮಿತಿ ರಚಿಸಿ ಕಾಲಹರಣ ಮಾಡುವುದು ಬೇಡ. ಜೋಶಿಯವರ ಮನೆ ತಲುಪುವ ಮುನ್ನವೇ ನಮ್ಮ ಬೇಡಿಕೆಗಳು ಈಡೇರಿ, ಆ ಬಗ್ಗೆ ಘೋಷಣೆ ಆಗಬೇಕು. ಇಲ್ಲವಾದರೆ ಹುಬ್ಬಳ್ಳಿಯಲ್ಲಿ 50 ಲಕ್ಷ ರೈತರನ್ನು ಸೇರಿಸಿ ಹೋರಾಟ ಮುಂದುವರಿಸುತ್ತೇವೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.ರೈತ ಹೋರಾಟದಲ್ಲಿ ಭಿನ್ನಮತ ಸ್ಫೋಟ:ಇದೇ ವೇಳೆ, ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಟೋಲ್‌ಗೇಟ್‌ ಬಳಿ ರೈತ ಹೋರಾಟದಲ್ಲಿ ಭಿನ್ನಮತ ಕೂಡ ವ್ಯಕ್ತವಾಯಿತು. ಹತ್ತರಗಿಯಿಂದ ಪಾದಯಾತ್ರೆ ಮುಂದುವರಿದ ಹಿನ್ನೆಲೆಯಲ್ಲಿ ಹೆದ್ದಾರಿ ತೆರವು ಮಾಡುವಂತೆ ಕೆಲ ರೈತ ಮುಖಂಡರು ಮನವಿ ಮಾಡಿದಾಗ, ಕೆಲವು ಪ್ರತಿಭಟನಾಕಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬೇಡಿಕೆ ಈಡೇರುವವರೆಗೂ ಹೆದ್ದಾರಿ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಹೋರಾಟ ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರ ವಿರುದ್ಧ ಕಿಡಿಕಾರಿದರು. ಬಳಿಕ, ಪೊಲೀಸರು ಅವರ ಮನವೊಲಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.15ರ ವರೆಗೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಅಧ್ಯಕ್ಷ ಮಾಧವರೆಡ್ಡಿ ಆಗ್ರಹ
ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅಸ್ತಂಗತ