ಸಂತ್ರಸ್ತರಿಗೆ ಪರಿಹಾರ ಒದಗಿಸಿ: ರುದ್ರಪ್ಪ ಲಮಾಣಿ

KannadaprabhaNewsNetwork |  
Published : Feb 08, 2024, 01:30 AM IST
ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ  | Kannada Prabha

ಸಾರಾಂಶ

ನಗರದಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಮುಂಬರುವ ತಿಂಗಳು ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರಿಂದ ಯೋಜನೆ ರಚಿಸಿ ಕೂಡಲೇ ವರ್ಕ್ ಆರ್ಡರ್ ನೀಡಬೇಕು.

ಅಧಿಕಾರಿಗಳಿಗೆ ವಿಧಾನಸಭಾ ಉಪಸಭಾಧ್ಯಕ್ಷ ಸೂಚನೆ

ಕನ್ನಡ ಪ್ರಭ ವಾರ್ತೆ ಸವಣೂರು

ತಾಲೂಕಿನಾದ್ಯಂತ 2019ರಿಂದ 2023ರ ಅವಧಿಯಲ್ಲಿ ನೆರೆಗೆ ಹಾನಿಯಾದ ಸುಮಾರು 800 ಮನೆಗಳು ಬ್ಲಾಕ್‌ ಲಿಸ್ಟ್‌ಗೆ ಸೇರ್ಪಡೆಯಾಗಿವೆ. ಅದರಲ್ಲಿ ನೈಜ ಫಲಾನುಭವಿಗಳು ಇದ್ದಾರೆ. ಹಾಗಾಗಿ ಖುದ್ದಾಗಿ ಎಲ್ಲ ಮನೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಅವರ ಕಷ್ಟಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಮುಂಬರುವ ತಿಂಗಳು ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರಿಂದ ಯೋಜನೆ ರಚಿಸಿ ಕೂಡಲೇ ವರ್ಕ್ ಆರ್ಡರ್ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕುಷ್ಟರೋಗವು ಇತ್ತೀಚೆಗೆ ಹೆಚ್ಚಾಗತೊಡಗಿದೆ. ತಾಲೂಕಿನ ಪ್ರತಿ ಪಂಚಾಯಿತಿಗೂ ಸಹ ಆರೋಗ್ಯ ಸೇವೆ ಒದಗಿಸಲು ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಸಿಬ್ಬಂದಿ ನೀಡಲಾಗಿದ್ದು ರೋಗಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಹತ್ತಿಮತ್ತೂರಿನ ಗ್ರಾಮದಲ್ಲಿ ಡಾಕ್ಟರ್ ಫಾರ್ ಯು ಎಂದು ಆಸ್ಪತ್ರೆ ಕಟ್ಟಲಾಗಿದ್ದು, ಅಲ್ಲಿ ತಾಯಿ, ಮಕ್ಕಳನ್ನು ನೋಡಿಕೊಳ್ಳುವಂತಹ ವೈದ್ಯರಿಲ್ಲ. ತಾಲೂಕು ವೈದ್ಯಧಿಕಾರಿ ಈ ಕುರಿತು ಡಿಎಚ್ಒಗೆ ಪ್ರಸ್ತಾವನೆ ಸಲ್ಲಿಸಿದರೆ ಮುಂದಿನ ಕೆಲಸ ನಾನು ನೋಡಿಕೊಳ್ಳುತ್ತೇನೆ ಎಂದರು.

ತಾಲೂಕಿನಲ್ಲಿ ಒಟ್ಟು 211 ಅಂಗನವಾಡಿ ಕೇಂದ್ರಗಳಿದ್ದು, 133 ಸ್ವಂತ ಕಟ್ಟಡಗಳನ್ನು ಹೊಂದಿದ್ದು, 53 ಬಾಡಿಗೆ ಕಟ್ಟಡ ಹೊಂದಿದ್ದು ಉಳಿದ ಹಾಗೆ ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ನಗರದ ಸರ್ಕಾರಿ ಜಾಗವನ್ನು ಅಂಗನವಾಡಿಗಳಿಗೆ ನೀಡಿ ಎಂದು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ ರುದ್ರಪ್ಪ ಲಮಾಣಿ, ಅಂಗನವಾಡಿ ಮಕ್ಕಳಿಗೆ ಸುಸಜ್ಜಿತವಾದ ವಾತಾವರಣ, ಕೊಠಡಿ ಒದಗಿಸುವಂತೆ ತಿಳಿಸಿದರು.

ಜಲಜೀವನ್ ಕಾಮಗಾರಿ ತಾಲೂಕಿನಲ್ಲಿ ಪ್ರಗತಿಯಲ್ಲಿದ್ದು, ಪೈಪ್‌ಲೈನ್ ಮಾಡುವಾಗ ರಸ್ತೆಗಳಲ್ಲಿ ಗುಂಡಿ ತೋಡಲಾಗಿದೆ. ಹೀಗಾಗಿ ರಿಪ್ಯಾಚ್ ಮಾಡುವವರೆಗೂ ಯಾವುದೇ ಬಿಲ್ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳದ್ದು ಎಂದರು.

ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸಾವಿರಕ್ಕೂ ಅಧಿಕ ಉಳಿದಿದ್ದಾರೆ. ಅಧಿಕಾರಿಗಳೇ ನೀವೇನು ಮಾಡುತ್ತಿದ್ದೀರಿ. ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸಿ ಮುಂದಿನ ಸಭೆಗೆ ಬರುವಾಗ ಪ್ರತಿ ಫಲಾನುಭವಿಗಳಿಗೆ ಹಣ ಜಮೆ ಆಗಿರಬೇಕು ಎಂದು ಸಿಡಿಪಿಒ ಉಮಾಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರದೀಪ್ ಎಲ್., ತಾಪಂ ಇಒ ಎಫ್.ಜಿ. ಚಿನ್ನಣ್ಣನವರ್, ತಹಸೀಲ್ದಾರ ಭರತ್ ರಾಜ ಕೆ.ಎನ್., ಅಧಿಕಾರಿಗಳಾದ ರೇಣುಕಾ ದೇಸಾಯಿ, ಡಾ. ಚಂದ್ರಕಲಾ ಬಸ್ತಿ, ಸವಿತಾ ಚಕ್ರಸಾಲಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ