ಯೋಜನೆಗಳ ಕಾರ್ಯಪ್ರಗತಿ ಸಮಗ್ರ ಮಾಹಿತಿ ಒದಗಿಸಿ: ಡಾ. ಸುಶೀಲಾ

KannadaprabhaNewsNetwork |  
Published : Jun 29, 2024, 12:30 AM IST
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

Provide comprehensive information on progress of projects

- ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪ್ರಗತಿ ಮತ್ತು ಅವುಗಳ ಅನುಷ್ಠಾನದ ಮಾಹಿತಿ ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲ್ಲಿಕೆಯಾದ ದೂರುಗಳಿದ್ದಲ್ಲಿ ಕೂಡಲೇ ಬಗೆಹರಿಸಬೇಕು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿನ ವಸತಿ ಶಾಲೆಗಳಿಗೆ ಭೇಟಿ ನೀಡಬೇಕು. ಅಲ್ಲಿನ ಗುಣಮಟ್ಟದ ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಿಸಬೇಕು. ಯಾವುದೇ ದೂರುಗಳು ಇಲ್ಲದಂತೆ ಕ್ರಮವಹಿಸಿ ಎಂದು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಉದ್ಭವಿಸಿದ ಬರ ನಿರ್ವಹಣೆಯ ಕ್ರಮ, ಬೆಳೆ ವಿಮೆ, ಬರ ಪರಿಹಾರ ಹಾಗೂ ಪ್ರಸ್ತುತ ಸಾಲಿನ ಮಳೆ ವಿವರ, ರಸಗೊಬ್ಬರ, ಬಿತ್ತನೆ ಬೀಜಗಳ ದಾಸ್ತಾನು ಹಾಗೂ ವಿವಿಧ ಯೋಜನೆಗಳ ಮಾಹಿತಿ ಸಮರ್ಪಕವಾಗಿ ಒದಗಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮ, ಶಾಲೆಗಳ ಸ್ಥಿತಿ-ಗತಿ, ಗುಣಮಟ್ಟದ ಶಿಕ್ಷಣದ ಕುರಿತಾಗಿ ಅನುಷ್ಠಾನಗೊಳಿಸಿದ ರೂಪು-ರೇಷೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಮೇವಿನ ಲಭ್ಯತೆ, ರಾಸುಗಳ ಆರೋಗ್ಯ ಸ್ಥಿತಿ-ಗತಿ, ಬೆಳವಣಿಗೆ ಕ್ರಮ, ಹಾಲು ಉತ್ಪಾದನೆ ಹಾಗೂ ಇತರೆ ಮಾಹಿತಿ ನೀಡಬೇಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ, ಕಸ ವಿಲೇವಾರಿ ಹಾಗೂ ರಸ್ತೆಗಳ ಸ್ವಚ್ಛತೆ ಕುರಿತು ಕಾರ್ಯೋನ್ಮುಖರಾಗಬೇಕು. ಹಾಗೂ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಸ್ವಚ್ಛತೆ ಕಡೆ ಗಮನ ಹರಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿತ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಂಡು ಪ್ರಗತಿ ಸಾಧಿಸಬೇಕೆಂದರು.

ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಅರಣ್ಯ ಉಪ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿ ಜಿಲ್ಲೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

----

28ವೈಡಿಆರ್3

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ