ರೈತರಿಗೆ ಕಡ್ಡಾಯವಾಗಿ ವಿಮೆ ಸೌಲಭ್ಯ ಒದಗಿಸಿ: ದುರುಗೇಶ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡ ರೈತರಿಗೆ ಕಡ್ಡಾಯವಾಗಿ ಬೆಳೆ ವಿಮೆ ಸೌಲಭ್ಯ ಒದಗಿಸಬೇಕು.

ರಾಯಚೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡ ರೈತರಿಗೆ ಕಡ್ಡಾಯವಾಗಿ ಬೆಳೆ ವಿಮೆ ಸೌಲಭ್ಯ ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆವತಿಯಿಂದ 2023-24ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪ್ರತಿಕೂಲ ಸಿದ್ಧತೆ ಕುರಿತು ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದರು. 2023ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 52,452 ರೈತರು ನೊಂದಾಯಿಸಿಕೊಂಡಿದ್ದು, 61,679.75 ಹೆಕ್ಟರ್‌ನಷ್ಟು ಬೆಳೆ ನೊಂದಾಯಿಸಲಾಗಿದೆ ಮತ್ತು 2023ರ ಹಿಂಗಾರು ಹಂಗಾಮಿನಲ್ಲಿ 26,174 ರೈತರು ನೊಂದಾಯಿಸಿಕೊಂಡಿದ್ದು, 31,220 ಹೆಕ್ಟರ್‌ನಷ್ಟು ಬೆಳೆಗಳ ನೊಂದಾಯಿಸಲಾಗಿದೆ. ಒಟ್ಟಾರೆಯಾಗಿ 2023ನೇ ಸಾಲಿನಲ್ಲಿ ಒಟ್ಟು 78,626 ರೈತರು ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ ಈ ಎಲ್ಲಾ ರೈತರಿಗೆ ಕಡ್ಡಾಯವಾಗಿ ವಿಮೆ ಯೋಜನೆಯಡಿ ಪರಿಹಾರ ದೊರಕಬೇಕು ಎಂದು ತಿಳಿಸಿದರು.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಿಂದ ಒಟ್ಟು 957.00 ಲಕ್ಷದಷ್ಟು ಪ್ರೀಮಿಯಂ ಹಣ ಪಾವತಿಸಲಾಗಿದೆ. ಹಿಂಗಾರಿನಲ್ಲಿ 182 ಲಕ್ಷದಷ್ಟು ಪ್ರಿಮಿಯಂ ಹಣ ಪಾವತಿಸಲಾಗಿದ್ದು, ಸಂಬಂಧಪಟ್ಟ ವಿಮಾ ಕಂಪನಿಯಿಂದ ರೈತರಿಗೆ ಸರಿಯಾದ ರೀತಿಯಲ್ಲಿ ವಿಮೆಯ ಹಣ ಪಾವತಿಸಬೇಕು ಎಂದರು.

ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರು ಪಾವತಿಸಿದ ವಿಮೆಯ ಪ್ರಿಮಿಯಂ ಹಣ, ಬೆಳೆ ವಿಮೆ ಪರಿಹಾರದ ಸಂಪೂರ್ಣವಾದ ಮಾಹಿತಿ ಕುರಿತು 7 ದಿನಗಳೊಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ರೈತರಿಗೆ ಒದಗಿಸುವಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ, ಉಪನಿರ್ದೇಶಕ-1 ಜಯಪ್ರಕಾಶ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಉಪ್ಪು ರವಿ, ವಿಮಾ ಕಂಪನಿ ಪ್ರತಿನಿಧಿಗಳಾದ ಜನಾರ್ಧನ ತಿವಾರಿ, ವಿಜಯಕುಮಾರ, ವಿಠಲ್, ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದ ಸಹಾಯಕ ನಿರ್ದೇಶಕ ತಿಪ್ಪಣ್ಣ ನಾಯಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ, ಹುಸೇನ್ ಸಾಬ, ನಜೀರ ಆಹ್ಮದ್, ಕೃಷಿ ವಿಜ್ಞಾನ ಕೇಂದ್ರದ ದೇವರಾಜ, ಅಮರೇಗೌಡ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article