ಶಿವಮೊಗ್ಗ: ಶಿಕ್ಷಣ, ಕೃಷಿ ಮತ್ತು ಕಟ್ಟಡ ನಿರ್ಮಾಣ ಸೇರಿದಂತೆ ಆದ್ಯತಾ ವಲಯಕ್ಕೆ ಸಾಲಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಜಿಲ್ಲೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನಿಂದ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ, ಕೃಷಿ ಚಟುವಟಿಕೆ, ಮನೆ ನಿರ್ಮಾಣ ಸೇರಿದಂತೆ ವಿವಿಧ ಆದ್ಯತಾ ವಲಯಗಳಿಗೆ ನಿರೀಕ್ಷಿತ ಸಾಲ ಮಂಜೂರಾತಿಗಾಗಿ ಬರುವ ಅರ್ಜಿಗಳನ್ನು ತಿರಸ್ಕೃತಗೊಳಿಸದೆ ಮಂಜೂರು ಮಾಡಬೇಕು ಎಂದರು.
ಕೆಲವು ಆಯ್ದ ಬ್ಯಾಂಕುಗಳನ್ನು ಹೊರತುಪಡಿಸಿದರೆ ಅನೇಕ ಬ್ಯಾಂಕುಗಳ ವ್ಯವಸ್ಥಾಪಕರು ತಮಗೆ ನಿಗದಿಪಡಿಸಿದ ಗುರಿಯನ್ನು ತಲುಪಿಲ್ಲ. ಮುಂದಿನ ದಿನಗಳಲ್ಲಿ ಇದೇ ನಿರ್ಲಕ್ಷ್ಯ ಮುಂದುವರೆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಕೆಲವು ಖಾಸಗಿ ಬ್ಯಾಂಕುಗಳ ವ್ಯವಸ್ಥಾಪಕರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕು ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಅವರ ದುರ್ವರ್ತನೆಯನ್ನು ಸಾಬೀತುಪಡಿಸಿದಂತಾಗಿದೆ ಅಲ್ಲದೇ ಜಿಲ್ಲಾ ಮಟ್ಟದ ಮಹತ್ವದ ಸಭೆಗೆ ಆಗಮಿಸದಿರುವ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಸೇವೆ ನೀಡುತ್ತಿರುವುದು ಕೂಡ ಪ್ರಶ್ನಾರ್ಹವಾಗಿದೆ. ನಿರಂತರ ಸಭೆಗೆ ಗೈರು ಹಾಜರಾಗುತ್ತಿರುವವರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚಿಸಿದರು.ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರ ಮನೆಬಾಗಿಲಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವ ನಿಟ್ಟನಿಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕುಗಳ ಪರವಾದ ಪ್ರತಿನಿಧಿಗಳು ಸ್ಥಳದಲ್ಲಿದ್ದು, ಕಾರ್ಯನಿರ್ವಹಿಸದೇ ಇರುವ ಬಗ್ಗೆ ಗ್ರಾಮೀಣ ಜನರಿಂದ ಅನೇಕ ದೂರುಗಳು ಬರುತ್ತಿವೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಕೂಡಲೇ ಪರ್ಯಾಯ ಪ್ರತಿನಿಧಿಗಳನ್ನು ನೇಮಿಸಿ, ಬ್ಯಾಂಕಿನ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಸರ್ಕಾರಗಳು ಜನಸಾಮಾನ್ಯರ ಹಿತಕಾಯುವ ನಿಟ್ಟಿನಲ್ಲಿ ರೂಪಿಸಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಲಾಭವನ್ನು ಗ್ರಾಮೀಣ ಜನರು ಪಡೆದುಕೊಳ್ಳಲು ಅಗತ್ಯ ಸಹಕಾರ ನೀಡುವಂತೆ ಅವರು ತಾಕೀತು ಮಾಡಿದರು.ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ನೀಡಿದ ಬ್ಯಾಂಕಿನ ಸಾಲಸೌಲಭ್ಯ, ಯೋಜನೆಗಳ ಪ್ರಗತಿ ಹಾಗೂ ಮಂಜೂರಾದ ಸಾಲಸೌಲಭ್ಯ ಹಾಗೂ ಒದಗಿಸಲಾದ ಸಹಾಯಧನ, ಬಾಕಿ ಮತ್ತಿತರ ವಿವರಗಳನ್ನು ಪ್ರತಿ ಸೋಮವಾರದಂದು ಜಿಪಂ ಕಾರ್ಯಾಲಯಕ್ಕೆ ಖುದ್ದು ಸಲ್ಲಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ತಿಳಿಸಿದರು.ಕೃಷಿ ಕ್ಷೇತ್ರದಲ್ಲಿ ಶೇ.84ರಷ್ಟು ಸಾಲಸೌಲಭ್ಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.84ರಷ್ಟು, ಶಿಕ್ಷಣ ಮತ್ತು ಮನೆ ನಿರ್ಮಾಣಕ್ಕಾಗಿ ಶೇ.75ರಷ್ಟು, ಆದ್ಯತಾ ವಲಯಗಳಿಗೆ ಶೇ.79ರಷ್ಟು ಸಾಧಿಸಿವೆ. ಇನ್ನು ಕೆಲವು ಬ್ಯಾಂಕುಗಳ ಪ್ರಗತಿ ಆಶಾದಾಯಕವಾಗಿಲ್ಲ. ಅಂತಹ ಬ್ಯಾಂಕುಗಳ ವ್ಯವಸ್ಥಾಪಕರು ನಿರೀಕ್ಷಿತ ಗುರಿ ಸಾಧನೆಗೆ ಪ್ರಯತ್ನಿಸುವಂತೆ ಸೂಚಿಸಿದರು.ಸಭೆಯಲ್ಲಿ ಆರ್‌ಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಾಬುಲ್ಬಾರ್ಡೋಲಿ, ನಬಾರ್ಡ್‌ನ ರಿಜನಲ್ ಮ್ಯಾನೇಜರ್ ಶರತ್‌ಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಬಿ.ಚಂದ್ರಶೇಖರ್ ಸೇರಿಂದತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.