ಕನಕಗಿರಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡದರೆ ಪೋಷಕರು ಇಳಿ ವಯಸ್ಸಿನಲ್ಲಿ ಅನಾಥರಾಗುವುದಿಲ್ಲ ಎಂದು ಕಾರಟಗಿಯ ಕೆಪಿಎಸ್ ಶಾಲೆಯ ಶಿಕ್ಷಕಿ ಅನ್ನಪೂರ್ಣಾ ಸಜ್ಜನ್ ಹೇಳಿದರು.
ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡಿದರೆ, ಮನೆಯು ಸಂಸ್ಕಾರ ಹಾಗೂ ಬದುಕನ್ನು ಕಲಿಸುತ್ತದೆ. ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಕರ್ತವ್ಯ ಶ್ರೇಷ್ಠವಾಗಿದೆ. ತಾಯಿಯಾದವಳು ಮಗುವಿನೊಂದಿಗೆ ಎಷ್ಟು ಸಮಯ ಕಳೆಯುತ್ತೇವೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಮಕ್ಕಳೊಂದಿಗೆ ಹೆಚ್ಚು ಕಾಲ ಬೆರೆತರೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ತಾಯಿ ಮೊಬೈಲ್, ಧಾರಾವಾಹಿಗಳಿಂದ ದೂರವಿದ್ದು, ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಇನ್ನೂ ಮಕ್ಕಳು ಮಣ್ಣಿನ ಮುದ್ದೆಯಾಗಿದ್ದು, ಅದಕ್ಕೆ ರೂಪವನ್ನು ಕೊಡುವ ಕೆಲಸ ತಾಯಿ ಮಾಡಬೇಕು.೩೯ ವಯಸ್ಸಿನವರೆಗೆ ಮಾತ್ರ ಬದುಕಿದ್ದ ವಿವೇಕಾನಂದರು, ಛತ್ರಪತಿ ಶಿವಾಜಿ ಮಹಾರಾಜರು ಅವರ ತಾಯಂದಿರಿಂದ ಸಂಸ್ಕಾರ ಕಲಿತು ಇಂದಿಗೂ ಸ್ಮರಿಸುವಂತಾಗಿದ್ದಾರೆ. ನಮ್ಮ ಮಕ್ಕಳೇ ನಮಗೆ ಭವಿಷ್ಯದಲ್ಲಿ ಸಮಸ್ಯೆಯಾಗಬಾರದು. ಅದಕ್ಕಾಗಿ ಮಕ್ಕಳಿಗೆ ಚಿಕ್ಕವರಿಂದಲೇ ಸಹಾಯ ಮಾಡುವ ಗುಣ, ಹಿರಿಯರಿಗೆ ಗೌರವಿಸುವ ಗುಣ ಕಲಿಸಬೇಕು. ರಾಮಾಯಣ, ಮಹಾಭಾರತ, ಶೂರ-ಧೀರರ ಮಹನೀಯರ ಕಥೆಗಳನ್ನು ಹೇಳಿಕೊಡಬೇಕು. ಆಗ ಮಾತ್ರ ಮಕ್ಕಳು ಸಂಸ್ಕಾರಯುತವಾಗಿ ನಾಗರಿಕ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದರು.
ಆನಂತರ "ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಮಹಿಳೆಯರ ಪಾತ್ರ " ಕುರಿತು ಕೊಪ್ಪಳ ವಿವಿ ಉಪನ್ಯಾಸಕಿ ಡಾ. ಗೀತಾ ಪಾಟೀಲ್ ಮಾತನಾಡಿ, ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದ ಮಹಿಳೆಯರು ಅದನ್ನು ಪಡೆದ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಉಳಿತಾಯವಾದ ಹಣವನ್ನು ಯೋಚನೆಯಿಂದ ಬಳಸಿ ಅಭಿವೃದ್ಧಿ ಸಾಧಿಸಬೇಕು. ಸಾಲದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡು ಸಾಲದ ಶೂಲಕ್ಕೆ ತುತ್ತಾಗದೇ ಇತರರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಸೂಲಗಿತ್ತಿ ದುರಗಮ್ಮ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ ದುರುಗಮ್ಮ ಹಾಗೂ ಸಾಧಕಿ ಈರಮ್ಮ ಅವರನ್ನು ಗೌರವಿಸಲಾಯಿತು.
ಕ.ಕ. ಸಮನ್ವಯಾಧಿಕಾರಿ ಸುಧಾ, ಪ.ಪಂ. ಮಾಜಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಶ್ರೀ ಕ್ಷೇತ್ರ ಧ.ಗ್ರಾ.ಯೋ. ನಿರ್ದೇಶಕ ಪ್ರಕಾಶರಾವ್, ಕ್ಷೇತ್ರ ಯೋಜನಾಧಿಕಾರಿ ನಿಂಗಪ್ಪ ಅಗಸರ್ ಇತರರಿದ್ದರು.