ಹೂವಿನಹಡಗಲಿ: ಜಾಗ ಐತಿಯೊಳಗ ಬನ್ನೀರಿ ನೀವು ನಮ್ಮ ಬಳಗ ಎನ್ನುವ ಜಾನಪದ ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಈ ಜಾನಪದದ ಸಾಲುಗಳು ಅಕ್ಷರಶಃ ಸತ್ಯ.
ಸಿಂಗಟಾಲೂರು ಏತ ನೀರಾವರಿ ಹಿನ್ನೀರು ನೂರಾರು ಪ್ರಭೇದ ಹೊಂದಿರುವ ಹಕ್ಕಿಗಳ ವಾಸ ಸ್ಥಾನವಾಗಿದೆ. ಜತೆಗೆ ನೀರು ನಾಯಿಗಳ ಆಹಾರ ಹುಡುಕಾಟದ ದೃಶ್ಯಗಳನ್ನು ನೋಡಿ ಪ್ರವಾಸಿಗರು ಫುಲ್ ಖುಷಿಯಾಗುತ್ತಿದ್ದಾರೆ. ಜತೆಗೆ ವಿದೇಶಿ ಹಕ್ಕಿಗಳನ್ನು ಕಣ್ಮುಂಬಿಕೊಳ್ಳುತ್ತಿದ್ದಾರೆ.
ರುಡ್ಡಿ ಶೆಲ್ಡಕ್ ಹೆಸರಿನ ಬ್ರಾಹ್ಮಣಿ ಬಾತುಕೋಳಿಗಳು ಚಳಿಗಾಲದ ಸಂದರ್ಭದಲ್ಲಿ ಮಧ್ಯ ಏಷ್ಯಾ ಮತ್ತು ಆಗ್ನೇಯ ಯುರೋಪ್‌ನಿಂದ ಭಾರತದ ಕರ್ನಾಟಕ ಸೇರಿದಂತೆ ಇನ್ನಿತರ ಕಡೆಗಳಿಗೆ ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಗಮಿಸಿ, ತನ್ನ ಸಂತಾನೋತ್ಪತ್ತಿ ಮುಗಿದ ಬಳಿಕ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತವೆ.ಈ ಪಕ್ಷಿಗಳು ಮಧ್ಯ ಏಷ್ಯನ್ ಹೈವೇ ಎಂಬ ಪ್ರಮುಖ ವಲಸೆ ಮಾರ್ಗದಲ್ಲಿ ಹಾರಾಟ ನಡೆಸುತ್ತವೆ. ಹಿಮಾಲಯ ಪರ್ವತ ಶ್ರೇಣಿಗಳ ಮೇಲಿಂದ ಸುಮಾರು 6,800 ಮೀಟರ್ ಎತ್ತರದ ವರೆಗೂ ಹಾರಬಲ್ಲ ಸಾಮರ್ಥ್ಯ ಈ ಹಕ್ಕಿಗಳಿಗೆ ಇದೆ.
ಈ ಸಿಂಗಟಾಲೂರು ಹಿನ್ನೀರಿನ ಪರಿಸರದಲ್ಲಿ ಚಳಿಗಾಲ ಸಮೀಪಿಸುತ್ತಿದಂತೆಯೇ ಹಲವಾರು ಪಕ್ಷಿಗಳು ವಲಸೆ ಬರುತ್ತವೆ. ದೂರದ ಕಲ್ಲು ಬಂಡೆಗಳ ನಡುವೆ ಕೇಸರಿ ಬಣ್ಣದ ಕಂದು ಬಾತುಕೋಳಿಗಳು ನೀರಿನಲ್ಲಿ ವಿಹರಿಸುವುದನ್ನು ಕಣ್ತುಂಬಿಕೊಳ್ಳಲು ಪರಿಸರ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.ಭಾರತಕ್ಕೆ ವಲಸೆ ಬರುವಾಗ ಹಿಮಾಲಯ ಪರ್ವತಗಳ ಮೇಲೆಯೇ ಬರುತ್ತವೆ. ಆದರೆ ಅಲ್ಲಿ ಆಮ್ಲಜನಕ ಇರುವುದೇ ಇಲ್ಲ. ಆದರೂ ಈ ಹಕ್ಕಿಗಳು ಹೇಗೆ ಹಿಮಾಲಯ ದಾಟುತ್ತವೆ ಎನ್ನುವುದೇ ಸೋಜಿಗವಾಗಿದೆ.
ಮಂಗೋಲಿಯಾ, ಟಿಬೆಟ್ ಮತ್ತು ರಷ್ಯಾದ ಕೆಲವು ಭಾಗಗಳನ್ನು ಒಳಗೊಂಡಂತೆ, ಮಧ್ಯ ಏಷ್ಯಾದ ಎತ್ತರದ ಪ್ರದೇಶಗಳಲ್ಲಿ ಈ ಬಾತುಕೋಳಿಗಳು ಸಂತಾನೋತ್ಪತ್ತಿ ಮಾಡುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ,ಇವುಗಳು ಸರೋವರಗಳು ಮತ್ತು ನದಿಗಳ ಬಳಿ ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ. ಚಳಿಗಾಲದ ತಿಂಗಳಲ್ಲಿ, ಕಂದು ಬಾತುಕೋಳಿಗಳು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದ ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಬರುತ್ತವೆ.ಕಂದು ಬಾತುಕೋಳಿಗಳನ್ನು ಇಂಟರ್ ನ್ಯಾಶನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಸಂಸ್ಥೆಯವರು ಅಳಿವಿನ ಅಂಚಿನಲ್ಲಿರುವ ಹಕ್ಕಿಗಳೆಂದು ಘೋಷಿಸಿದ್ದಾರೆ. ಅವುಗಳ ಆವಾಸಸ್ಥಾನದ ನಷ್ಟ, ಬೇಟೆ ಮತ್ತು ಮಾಲಿನ್ಯದಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.ಪ್ರವಾಸಿಗರು ಚಳಿಗಾಲದ ತಿಂಗಳಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಬಳಿ ಇರುವ ಸಿಂಗಟಾಲೂರು ಡ್ಯಾಂಗೆ ಭೇಟಿ ಕೊಟ್ಟಾಗ ಈ ವಿದೇಶಿ ಹಕ್ಕಿಗಳನ್ನು ನೋಡಬಹುದು ಎನ್ನುತ್ತಾರೆ ಪಕ್ಷಿ ವೀಕ್ಷಕ ಹಾಗೂ ಹವ್ಯಾಸಿ ಛಾಯಾಗ್ರಾಹಕ ಸೋಮೇಶಪ್ಪ ಸಿ.ಎನ್. ಅಲ್ಲಿಪುರ.