ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಅನಿಲ್ ಕುಮಾರ್

KannadaprabhaNewsNetwork |  
Published : Mar 12, 2026, 12:15 AM IST
೧೧ಕೆಎಲ್‌ಆರ್-೮ಎಂಎಲ್ಸಿ ಅನಿಲ್‌ಕುಮಾರ್. | Kannada Prabha

ಸಾರಾಂಶ

ಟಾಟಾ ವಿಸ್ಟ್ರಾನ್ ಕಂಪನಿ ಹೊರತುಪಡಿಸಿ ಉಳಿದೆಲ್ಲಾ ಕಂಪನಿ ಅವರು ರಾಜ್ಯದ ಕೈಗಾರಿಕಾ ಮತ್ತು ಕಾರ್ಮಿಕ ನೀತಿ ಪಾಲಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ವಲಯಗಳಲ್ಲಿ ಸ್ಥಾಪಿತವಾಗಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿರುವ ಉದ್ಯೋಗ ಅವಕಾಶಗಳ ಕುರಿತು ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಯಲ್ಲಿ ಎಂಎಲ್ಸಿ ಅನಿಲ್ ಕುಮಾರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರನ್ನು ಪ್ರಶ್ನಿಸಿದರು.ನರಸಾಪುರ-ವೇಮಗಲ್ ಕೈಗಾರಿಕಾ ವಲಯಗಳಲ್ಲಿ ಒಟ್ಟು ಎಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿವೆ ಎಂಬ ಬಗ್ಗೆ ಅನಿಲ್ ಕುಮಾರ್ ವಿವರ ಕೇಳಿದ್ದು, ಒಟ್ಟು 26 ಬೃಹತ್ ಕೈಗಾರಿಕೆಗಳು ಮತ್ತು 12 ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇವುಗಳ ಪೈಕಿ ಟಾಟಾ ವಿಸ್ಟ್ರಾನ್ ಕಂಪನಿ ಹೊರತುಪಡಿಸಿ ಉಳಿದೆಲ್ಲಾ ಕಂಪನಿ ಅವರು ರಾಜ್ಯದ ಕೈಗಾರಿಕಾ ಮತ್ತು ಕಾರ್ಮಿಕ ನೀತಿ ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು. ಆದರೆ ಎರಡು ಬೃಹತ್ ಕೈಗಾರಿಕೆಗಳಾದ ಹೊಂಡಾ ಮತ್ತು ಟಾಟಾ (ವಿಸ್ಟ್ರಾನ್) ಕಂಪನಿಗಳ ಕುರಿತು ಪ್ರಶ್ನೆ ಎತ್ತಿದ ಅನಿಲ್ ಕುಮಾರ್ ಅವರು, ಹೊಂಡಾ ಕಂಪನಿಯಲ್ಲಿ ಸೂಕ್ತ ಪ್ರಮಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತಿದೆ. ಆದರೆ ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿ ಕೇವಲ ಶೇ.೫೫ರಷ್ಟು ಮಾತ್ರ ಸ್ಥಳೀಯರಿಗೆ ಉದ್ಯೋಗ ನೀಡಿದೆ ಎಂದು ಆರೋಪಿಸಿದರು.ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿ ಒಟ್ಟು ಸುಮಾರು 23,918 ಮಂದಿ ಉದ್ಯೋಗದಲ್ಲಿದ್ದು, ಅವರಲ್ಲಿ 13,384 ಮಂದಿ ಮಾತ್ರ ಸ್ಥಳೀಯರಾಗಿದ್ದಾರೆ, ಕೋಲಾರ ಜಿಲ್ಲೆಯವರಿಗೆ ಕೇವಲ 5,781 ಮಂದಿಗೆ ಮಾತ್ರ ಉದ್ಯೋಗ ದೊರೆತಿದೆ. ಇದು ರಾಜ್ಯ ಸರ್ಕಾರದ ಕೈಗಾರಿಕಾ ನಿಯಮದಲ್ಲಿ ಹೇಳಿರುವ 75 ಶೇಕಡಾ ಪ್ರಮಾಣಕ್ಕೆ ತಲುಪುವುದಿಲ್ಲ ಎಂದು ಅನಿಲ್ ಕುಮಾರ್ ಹೇಳಿದರು.ಈ ಕುರಿತು ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅನಿಲ್‌ಕುಮಾರ್ ಹೇಳುತ್ತಿರುವಂತೆ ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿ ಒಟ್ಟು 23,918 ಮಂದಿ ಉದ್ಯೋಗದಲ್ಲಿದ್ದು, ಅವರಲ್ಲಿ 13,384 ಮಂದಿ ಸ್ಥಳೀಯರು ಹಾಗೂ 5,781 ಮಂದಿ ಕೋಲಾರ ಜಿಲ್ಲೆಯವರಾಗಿದ್ದಾರೆ. ಟಾಟಾ (ವಿಸ್ಟ್ರಾನ್) ಕಂಪನಿ ಆಪಲ್ ಮೊಬೈಲ್ ತಯಾರಿಕಾ ಘಟಕವಾಗಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡದಿರುವ ಬಗ್ಗೆ ಕಂಪನಿಯನ್ನು ಪ್ರಶ್ನಿಸಲಾಗಿದೆ ಎಂದು ಸಚಿವರು ಹೇಳಿದರು. ಇದಕ್ಕೆ ಕಂಪನಿ ಪ್ರತಿಕ್ರಿಯಿಸಿ, ತರಬೇತಿ ಪಡೆದು ಗುಣಮಟ್ಟದ ಕೆಲಸ ಮಾಡಲು ಯೋಗ್ಯರು ಲಭ್ಯವಾಗದ ಕಾರಣ ಖಾಯಂ ಉದ್ಯೋಗ ನೀಡಲಾಗಿಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ತರಬೇತಿ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.ಮರು ಪ್ರಶ್ನೆ ಮಾಡಿದ ಅನಿಲ್ ಕುಮಾರ್ ಅವರು, ಕಂಪನಿಗಳು ಉದ್ಯೋಗಿಗಳನ್ನು ನೇರವಾಗಿ ನೇಮಕ ಮಾಡಿಕೊಳ್ಳದೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿವೆ, ಗುತ್ತಿಗೆ ಅವಧಿಯನ್ನು ಕೇವಲ 11 ತಿಂಗಳಿಗೆ ನೀಡಲಾಗುತ್ತಿದ್ದು, ನಂತರ ಅವರನ್ನು ಮೂರು ವರ್ಷಗಳವರೆಗೆ ಮುಂದುವರಿಸಲಾಗುತ್ತಿದೆ. ಆದರೆ ಮೂರು ವರ್ಷಗಳ ನಂತರ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ಹೇಳಿದರು.ಯುವಕರು ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯೋಗ ಕಳೆದುಕೊಂಡರೆ ಅವರ ಭವಿಷ್ಯ ಅನಿಶ್ಚಿತವಾಗುತ್ತದೆ. ಹೊಂಡಾ ಕಂಪನಿಯಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲದೆ, ಕಾರ್ಯಕ್ಷಮತೆ ಮತ್ತು ಸೇವಾವಧಿಯ ಆಧಾರದಲ್ಲಿ ಉದ್ಯೋಗಿಗಳನ್ನು ಖಾಯಂ ಮಾಡಲಾಗುತ್ತಿದೆ ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್ ಅವರು, ಟಾಟಾ (ವಿಸ್ಟ್ರಾನ್) ಕಂಪನಿ ಸುಮಾರು 1,91,419 ಕೋಟಿ ರುಪಾಯಿ ಬಂಡವಾಳ ಹೂಡಿಕೆ ಮಾಡಿದೆ. ಸರ್ಕಾರದ ಒಪ್ಪಂದದ ಪ್ರಕಾರ 1150 ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದ್ದರೂ, ಈಗಾಗಲೇ ಸುಮಾರು 23 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಲಾಗಿದೆ, ಈ ಯೋಜನೆ ಐಟಿ-ಬಿಟಿ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಂಪನಿ ಉದ್ಯೋಗಾಕಾಂಕ್ಷಿಗಳಿಗೆ ಮೂರು ವರ್ಷಗಳ ಕಾಲ ತರಬೇತಿ ನೀಡುತ್ತಿದ್ದು, ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು ಖಾಯಂ ಉದ್ಯೋಗಿಗಳನ್ನಾಗಿ ಮಾಡಲಾಗುತ್ತದೆ. ಎಲ್ಲರನ್ನು ಮೂರು ವರ್ಷಗಳ ನಂತರ ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂಬುದು ಸರಿಯಾದ ಮಾಹಿತಿ ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.ಯಾವುದೇ ಸಮಸ್ಯೆಗಳಿದ್ದರೆ ಕಂಪನಿಯನ್ನು ಕರೆಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನ ಸಂಕಷ್ಟ ದೂರ ಮಾಡುವ ಶಕ್ತಿ ಶಿವನಾಮಸ್ಮರಣೆಯಲ್ಲಿದೆ
ಗಾಡಿ ಓಟದ ಸ್ಪರ್ಧೆ: ಮಾರುತಿ ಆರಂಜ್ಯೋತಿ ತಂಡ ಪ್ರಥಮ