ಸೌಲಭ್ಯ ಕಲ್ಪಿಸಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ: ಶಾಸಕಿ ರೂಪಾಲಿ

KannadaprabhaNewsNetwork |  
Published : Dec 06, 2025, 02:30 AM IST
ರೂಪಾಲಿ | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದೇ ಒಂದು ಉಪಕರಣ, ತಜ್ಞ ವೈದ್ಯರನ್ನು ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಿಗೈಯಲ್ಲಿ ಉದ್ಘಾಟನೆ ಮಾಡಲು ಬಂದರು ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಶಾಸಕಿ ರೂಪಾಲಿ ಎಚ್ಚರಿಕೆ ನೀಡಿದ್ದಾರೆ.

ಕಾರವಾರ: ನಗರದ ಮೆಡಿಕಲ್ ಕಾಲೇಜ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಯಾವುದೆ ಸೌಲಭ್ಯ ಕಲ್ಪಿಸದೆ ಬರಿಗೈಯಲ್ಲಿ ಮುಖ್ಯಮಂತ್ರಿ ಉದ್ಘಾಟನೆಗೆ ಬಂದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆಯ ಸ್ವಾಗತ ಎದುರಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರೂಪಾಲಿ ಎಸ್.ನಾಯ್ಕ ಆಸ್ಪತ್ರೆಗೆ ಯಾವುದೆ ಸೌಲಭ್ಯ ಕಲ್ಪಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಲ್ಲಿನ ಜನತೆಯ ಆರೋಗ್ಯ ತಪಾಸಣೆಗೆ ಅತ್ಯಗತ್ಯವಾದ ಎಂಆರ್ ಐ ಮಶೀನ್ ಇಲ್ಲ. ಎಂಆರ್ ಐ ಪರೀಕ್ಷೆಗೆ ಜನತೆ 200-250 ಕಿ.ಮೀ. ದೂರ ಹೋಗಬೇಕಾಗಿದೆ. ಹೃದ್ರೋಗ ತಜ್ಞರು, ನರ ರೋಗ ತಜ್ಞರು ಹೀಗೆ ತಜ್ಞ ವೈದ್ಯರು ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದೇ ಒಂದು ಉಪಕರಣ, ತಜ್ಞ ವೈದ್ಯರನ್ನು ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಿಗೈಯಲ್ಲಿ ಉದ್ಘಾಟನೆ ಮಾಡಲು ಬಂದರು ತೀವ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ₹150 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ₹16 ಕೋಟಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನಂತಕುಮಾರ ಹೆಗಡೆ ಸಂಸದರಿರುವಾಗ ತುರ್ತುನಿಗಾ ಘಟಕ್ಕಾಗಿ ನೀಡಿತ್ತು. ಆ ಹಣದಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿಯೂ ಆರಂಭವಾಗಿತ್ತು. ಈಗ ಕೇವಲ ಕಟ್ಟಡ ನಿರ್ಮಾಣ ಮಾಡಿ ರೋಗಿಗಳಿಗೆ ಯಾವುದೆ ಸೌಲಭ್ಯ ಕಲ್ಪಿಸದೆ ಉದ್ಘಾಟನೆ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಯಾವ ನೈತಿಕತೆ ಇದೆ ಎಂದು ರೂಪಾಲಿ ಎಸ್.ನಾಯ್ಕ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಆಧುನಿಕ ಉಪಕರಣಗಳು ಇಲ್ಲ. ಹೀಗಾಗಿ ಜಿಲ್ಲಾದ್ಯಂತ ವೈದ್ಯರ ಹುದ್ದೆ ಭರ್ತಿ ಮಾಡಿ, ಉಪಕರಣಗಳನ್ನು ಕೊಟ್ಟು ನಂತರ ಮುಖ್ಯಮಂತ್ರಿ ಉದ್ಘಾಟನೆಗೆ ಬರಲಿ.

ಹಿಂದಿನ ಸರ್ಕಾರ ರೂಪಿಸಿದ ಯೋಜನೆಯನ್ನು ಈಗಿನ ಸರ್ಕಾರ ಉದ್ಘಾಟಿಸುವುದು ಸಹಜ. ಉದ್ಘಾಟನೆಗೆ ಬಿಜೆಪಿಯ ಯಾವ ವಿರೋಧವೂ ಇಲ್ಲ. ಆದರೆ ಯಾವುದೇ ಸೌಲಭ್ಯ ಕಲ್ಪಿಸದೆ, ಯಾವುದೇ ಕೊಡುಗೆ ನೀಡದೆ ಕಟ್ಟಡ ಉದ್ಘಾಟಿಸುವುದು ಯಾವ ಪುರುಷಾರ್ಥಕ್ಕೆ ಎಂದು ರೂಪಾಲಿ ಎಸ್. ನಾಯ್ಕ ಪ್ರಶ್ನಿಸಿದ್ದು, ಮೊದಲು ಎಂಆರ್ ಐ ಮಶೀನ್, ತಜ್ಞ ವೈದ್ಯರು ಹಾಗೂ ಅಧುನಿಕ ಉಪಕರಣಗಳನ್ನು ಒದಗಿಸಿ ನಂತರ ಉದ್ಘಾಟನೆಗೆ ಬನ್ನಿ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲೂ ಇವರಿಂದ ಆಗಿಲ್ಲ. ಕಾಯಿಲೆಗೀಡಾದವರು ಬೇರೆ ಬೇರೆ ಜಿಲ್ಲೆಗಳಿಗೆ ಅಲೆಯುವುದೇ ಆಗಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಪೀಠೋಪಕರಣಕ್ಕಾಗಿ ₹30 ಕೋಟಿ ಮಂಜೂರು ಮಾಡಿದ್ದರು. ಆ ಹಣ ಎಲ್ಲಿಗೆ ಹೋಯಿತು. ಇನ್ನು ಜನತೆಯ ತಾಳ್ಮೆ ಪರೀಕ್ಷಿಸಬೇಡಿ. ನಿಮ್ಮ ಕೊಡುಗೆ ಕೊಟ್ಟು ಆಮೇಲೆ ಉದ್ಘಾಟಿಸಿ. ಇಲ್ಲದಿದ್ದರೆ ಭಾರಿ ಪ್ರತಿಭಟನೆ ಎದುರಿಸಿ ಎಂದು ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೩೬ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ, ರಾಜ್ಯ ರೈತ ಸಂಘದಿಂದ ಮೆರವಣಿಗೆ
ಪ್ರತಿ ವಿಷಯದಲ್ಲೂ ವೈಜ್ಞಾನಿಕ ಅಧ್ಯಯನ ಮುಖ್ಯ: ಎಸ್.ವಿ. ಸಂಕನೂರ