ಕೊಪ್ಪಳ: ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಫಾರಂ-ಎಫ್ ಸೇರಿದಂತೆ ಅಗತ್ಯ ದಾಖಲಾತಿಗಳ ನಿರ್ವಹಣೆ ಕಡ್ಡಾಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು.ಅವರು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಮತ್ತು ಎಂಟಿಪಿ ಕಾಯ್ದೆಯಡಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪಿಸಿ & ಪಿ.ಎನ್.ಡಿ.ಟಿ ಕಾಯ್ದೆ-1994 ರಡಿಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಯಾವುದೇ ರೀತಿಯ ಅವಕಾಶವಿಲ್ಲ. ಆದಾಗ್ಯೂ ಇಂತಹ ಕಾನೂನು ಬಾಹಿರ ಕ್ರಮಗಳಲ್ಲಿ ಭಾಗಿಯಾದಲ್ಲಿ ಅಂತವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕಾಯ್ದೆಯಡಿ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಕಾರ್ಯ ನಿರ್ವಹಿಸಬೇಕು. ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡುವಂತಿಲ್ಲ. ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣಾ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ತಪಾಸಣಾ ಸಮಿತಿ ಈ ಕಾಯ್ದೆಯಡಿ ರಚಿಸಲಾಗಿದೆ. ತಪಾಸಣಾ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಲಹಾ ಸಮಿತಿ ಸಭೆಯಲ್ಲಿ ವರದಿ ನೀಡುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್ ಮಾತನಾಡಿ, ಪಿ.ಸಿ, ಪಿ.ಎನ್.ಡಿ.ಟಿ ಕಾಯ್ದೆ ಅನುಸಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧಿಸಲಾಗಿದ್ದು, ಸರ್ಕಾರಿ ಅಥವಾ ಖಾಸಗಿ ಯಾವುದೇ ವೈದ್ಯರು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಯಂತಹ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅವರಿಗೆ ಕಾರಾಗೃಹ ಶಿಕ್ಷೆ ಸಹಿತ ದಂಡ ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ವೈದ್ಯಕೀಯ ಪರವಾನಗಿ ರದ್ದುಪಡಿಸುವುದು. ನಂತರದ ಅಪರಾಧಕ್ಕೆ ಸಂಬಂಧಿಸಿದ ವೈದ್ಯರ ವೈದ್ಯಕೀಯ ಪರವಾನಗಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಶಾಶ್ವತವಾಗಿ ತೆಗೆದು ಹಾಕಿ ವೈದ್ಯಕೀಯ ವೃತ್ತಿ ನಡೆಸಲು ಅಜೀವ ನಿಷೇಧ ಹೇರಲಾಗುವುದು. ಒಂದು ವೇಳೆ ಸ್ವತಃ ಮಹಿಳೆ, ಆಕೆಯ ಪತಿ ಅಥವಾ ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಯತ್ನಿಸಿ ವೈದ್ಯರಿಗೆ ಒತ್ತಡ ಹೇರಿದಲ್ಲಿ ಅವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಸಭೆಗೆ ತಿಳಿಸಿದರು.ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳ ನೋಂದಣಿ, ನವೀಕರಣ ಹಾಗೂ ಹೊಸ ಅರ್ಜಿಗಳಿಗೆ ಅನುಮತಿ ಕುರಿತಂತೆ ಚರ್ಚಿಸಲಾಯಿತು.