ಕಾರಟಗಿ: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಹೊರಗಿನವರು, ನಮ್ಮ ಸಂಪತ್ತು ಲೂಟಿ ಮಾಡುತ್ತಿದ್ದರು. ಈಗ ರಾಷ್ಟ್ರದವರೇ ಆದ ಅದಾನಿ, ಅಂಬಾನಿಯಂತಹವರು ಕೊಳ್ಳೆ ಹೊಡೆಯುತ್ತಿದ್ದಾರೆ, ಇತ್ತ ಶತಕೋಟಿ ಭಾರತೀಯರಿಗೆ ತಲೆ ಮೇಲೆ ಸೂರಿಲ್ಲದಿರುವುದು ನಮ್ಮ ದೇಶದ ದುರಂತ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಹೇಳಿದರು.
ಪ್ರತಿ ಕಾರ್ಮಿಕ, ದಲಿತ ಕಾಲನಿಗಳು ಸ್ಲಂಗಳಾಗುತ್ತಿರುವ ಈ ಸಂದರ್ಭದಲ್ಲಿ ಸೂರಿಗಾಗಿ ಸಮರ ನಮ್ಮ ಹೋರಾಟ ನಡೆಯಲಿದೆ. ಮನೆಗಳನ್ನು ನೀಡುವ ಬದಲು ಬಡವರಿಗೆ ನಿವೇಶನಗಳನ್ನು ಕೊಡಿ. ಕೇರಳದಲ್ಲಿ ಮನೆ ಕಟ್ಟಿಕೊಳ್ಳಲು ₹7 ಲಕ್ಷ ನೀಡಲಾಗುತ್ತದೆ. ಆಂಧ್ರಪ್ರದೇಶದಲ್ಲಿ ₹5 ಲಕ್ಷ ಕೊಡುತ್ತಾರೆ. ಆದರೆ ಕರ್ನಾಟಕದಲ್ಲಿ ₹1.50 ಲಕ್ಷ ನೀಡುತ್ತಿದ್ದಾರೆ. ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ ಮಾತನಾಡಿ, ಕಮ್ಯುನಿಸ್ಟ್, ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟರೆ ಬೇರೆ ಯಾರೂ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಕೋಮು ಗಲಭೆ, ಸಂಘರ್ಷ ಇವುಗಳೆ ಬಿಜೆಪಿಯ ನೀತಿಗಳು, 1925ರಲ್ಲಿ ಕಾರ್ಮಿಕರ ಪರವಾಗಿ ಕಾನೂನು ಜಾರಿಗೆ ಬರುವಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಬಹು ದೊಡ್ಡ ಕೊಡುಗೆಯಿದೆ. ಆರ್.ಎಸ್.ಎಸ್. ಕೂಡ ನೂರು ವರ್ಷಗಳನ್ನು ಪೂರೈಸಿದೆ ಎಂದು ಸಂಭ್ರಮಾಚರಣೆ ನಡೆಸಿತು. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟ ಶೂನ್ಯ ಎಂದು ಟೀಕಿಸಿದರು.ಅಕ್ಷರ ದಾಸೋಹ ಬಿಸಿಯೂಟದ ಜಿಲ್ಲಾ ಸಂಚಾಲಕಿ ಸುನೀತಾ ಮಾತನಾಡಿ, ಸಿಪಿಐ ಮೊದಲಿನಿಂದಲೂ ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿ ಹೋರಾಟ ಮಾಡಿಕೊಂಡು ಬಂದ ಪರಿಣಾಮವಾಗಿ ಇಂದಿಗೂ ದುಡಿಯುವ ವರ್ಗದವರ ಮನದಲ್ಲಿ ಉಳಿದುಕೊಂಡಿದೆ. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರ ಬೇಡಿಕೆಗಳಿಗೆ ಚಳವಳಿಗಳನ್ನು ನಡೆಸಿಕೊಂಡು ಬರುತ್ತಿರುವುದರಿಂದ ನ್ಯಾಯ ಸಿಕ್ಕಿದೆ. ಶತಮಾನದುದ್ದಕ್ಕೂ ಮಹಾನ್ ನಾಯಕರು ಕಮ್ಯುನಿಸ್ಟ್‌ಗೆ ತಮ್ಮದೇ ಆದ ಗಟ್ಟಿತನ ತುಂಬಿದ್ದಾರೆ ಎಂದರು.
ಸಿಪಿಐ ಜಿಲ್ಲಾಧ್ಯಕ್ಷ ಎ. ಹುಲುಗಪ್ಪ, ಪ್ರಮುಖರಾದ ಮೌನಪ್ಪ, ಪ್ರಸನ್ನಕುಮಾರ, ಷಣ್ಮುಖಸ್ವಾಮಿ, ಮಹಿಳಾ ಸಂಘಟನೆ ಅಧ್ಯಕ್ಷೆ ದುರ್ಗಾವತಿ, ಅಕ್ಷರ ದಾಸೋಹ ಬಿಸಿಯೂಟದ ಅಧ್ಯಕ್ಷೆ ನೀಲಮ್ಮ, ಪಾರ್ವತಿ, ಬಸಮ್ಮ, ಗಂಗಮ್ಮ, ಶೇಖಮ್ಮ, ಲಕ್ಷ್ಮಣ ನಾಯಕ್, ಕಂಠೆಪ್ಪ ಸಿಂಗನಾಳ, ಮಲ್ಲಯ್ಯ ತಾ. ಕಾರ್ಯದರ್ಶಿ, ಜಗನ್ನಾಥ, ಮಂಜು ಇನ್ನಿತರರು ಇದ್ದರು.