ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಳೆವಿಮೆ ಸಂಬಂಧ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಹೆಸರು ನೋಂದಾಯಿಸಲು ಅಗತ್ಯ ಕ್ರಮವಹಿಸುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ಎನ್.ವಿ.ಪ್ರಸಾದ್ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆವಿಮೆ ಸೌಲಭ್ಯ ಬಳಸಿಕೊಳ್ಳುವಲ್ಲಿ ರೈತರಿಗೆ ಮತ್ತಷ್ಟು ಮಾಹಿತಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಾಕಷ್ಟು ದಾಸ್ತಾನು ಮಾಡಿಕೊಳ್ಳಬೇಕು ಎಂದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ಮಾತನಾಡಿ, ಮುಂಗಾರು ಹಂಗಾಮಿಗೆ ಮೇ 20 ರ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಹೋಬಳಿ ಮಟ್ಟ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳನ್ನು ಬೆಳೆವಿಮೆ ಯೋಜನೆಯಡಿ ಅಧಿಸೂಚಿತಗೊಂಡಿದೆ ಎಂದು ವಿವರಿಸಿದರು.
ಕೊಡಗು ಜಿಲ್ಲೆಗೆ ಓರಿಯಂಟಲ್ ಸಾಮಾನ್ಯ ವಿಮಾ ಕಂಪನಿಯನ್ನು 2024-25 ಮತ್ತು 2025-26 ನೇ ಸಾಲಿಗೆ ಅನುಷ್ಠಾನ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಭತ್ತದ (ನೀರಾವರಿ ಮತ್ತು ಮಳೆಯಾಶ್ರಿತ) ಬೆಳೆಗೆ ಆ.16 ಮತ್ತು ಮುಸುಕಿನ ಜೋಳದ ಬೆಳೆಗೆ ಜು.31 ರವರೆಗೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.ಶೇ.22 ಮಳೆ ಕೊರತೆ:
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಇದುವರೆಗೆ 454 ಮಿ.ಮೀ. ಮಳೆಯಾಗಿದ್ದು, ಶೇ.5ರಷ್ಟು ಹೆಚ್ಚಾಗಿದೆ. ಆದರೆ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 190 ಮಿ.ಮಿ. ಆಗಿದ್ದರೆ, 146 ಮಿ.ಮೀ. ಮಾತ್ರ ಮಳೆಯಾಗಿದೆ. ಶೇ.22 ರಷ್ಟು ಮಳೆ ಕೊರತೆ ಕಂಡುಬಂದಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಮೀನುಗಾರಿಕೆಗೆ ಬೇಡಿಕೆಯಿದ್ದು, ಕೆರೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಈ ಸಂಬಂಧ ತಾ.ಪಂ.ಇಒಗಳು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸುವಂತೆ ಡಾ.ಎನ್.ವಿ.ಪ್ರಸಾದ್ ಹೇಳಿದರು.
ಸೋರುವ ಶಾಲೆಗಳ ಪಟ್ಟಿ ಮಾಡಿ:ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಷ್ಟು ಶಾಲೆಗಳು ಸೋರುತ್ತಿವೆ ಎಂಬ ಬಗ್ಗೆ ಕೂಡಲೇ ಪಟ್ಟಿ ಮಾಡಿ ವರದಿ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿರ್ದೇಶನ ನೀಡಿದರು.
ಕಳೆದ ಆರು ತಿಂಗಳಿನಿಂದ ಸತತವಾಗಿ ಬಿಪಿಎಲ್‌ನಡಿ ಆಹಾರ-ಪಡಿತರ ಪಡೆಯದಿರುವವರ ಮಾಹಿತಿಯನ್ನು ಆಹಾರ ಇಲಾಖೆಯ ಆಯುಕ್ತಾಲಯಕ್ಕೆ ಕಳುಹಿಸುವಂತೆ ಸಲಹೆ ಮಾಡಿದರು.ಕೊಡವ ಹೆರಿಟೇಜ್ ಸಂಬಂಧಿಸಿದಂತೆ ಮುಂದುವರಿದ ಕಾಮಗಾರಿಗೆ 5 ಕೋಟಿ ರು. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಸಂಬಂಧ ಅನುದಾನ ಬಿಡುಗಡೆಯಾಗಬೇಕಿದೆ. ಕುಶಾಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಮಹಾತ್ಮ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುರಿ ತಲುಪಲಾಗಿದೆ. ಸ್ವಚ್ಚ ಭಾರತ ಮಿಷನ್ ಅಭಿಯಾನ ಹಾಗೂ ವಸತಿ ಯೋಜನಾ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಮಾಹಿತಿ ನೀಡಿದರು.ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜೊತೆಗೆ ಚರ್ಚಿಸಲಾಗಿದ್ದು, ಸೋಮವಾರಪೇಟೆ ಮತ್ತು ವಿರಾಜಪೇಟೆಗೆ ಹತ್ತಿರದ ಜಿಲ್ಲೆಯಿಂದ ಮೂವರು ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ಡಾ.ಸತೀಶ್ ಕುಮಾರ್ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖೆ ಅಧಿಕಾರಿ ಹೊನ್ನೇಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ, ಸೆಸ್ಕ್ ಇಇ ಅನಿತಾ ಬಾಯಿ, ಜಿ.ಪಂ.ಎಂಜಿನಿಯರ್‌ಗಳಾದ ಸುರೇಶ್ ಕುಮಾರ್, ಮುತ್ತುರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೀಶ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಕುಮಾರ್, ಮೋಹನ್ ಕುಮಾರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾದೇವಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.