ಗ್ರಾಪಂ ನೀರಗಂಟಿ ಗಿರಿಜಾ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಿ: ಶಾಸಕ ಎಚ್.ಟಿ.ಮಂಜು ಒತ್ತಾಯ

KannadaprabhaNewsNetwork |  
Published : Sep 18, 2024, 01:50 AM IST
17ಕೆಎಂಎನ್ ಡಿ26 | Kannada Prabha

ಸಾರಾಂಶ

ವಿಶ್ವ ಪ್ರಜಾಪ್ರಭುತ್ವದ ದಿನ ವೇಳೆ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಅಪಘಾತದಿಂದ ಮೃತಪಟ್ಟ ಗ್ರಾಪಂ ನೀರಗಂಟಿ ಗಿರಿಜಾ (34) ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಸರ್ಕಾರಿ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಶಾಸಕ ಎಚ್.ಟಿ.ಮಂಜು ಒತ್ತಾಯ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿಶ್ವ ಪ್ರಜಾಪ್ರಭುತ್ವದ ದಿನ ವೇಳೆ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಅಪಘಾತದಿಂದ ಮೃತಪಟ್ಟ ಗ್ರಾಪಂ ನೀರಗಂಟಿ ಗಿರಿಜಾ (34) ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಸೂಕ್ತ ಸರ್ಕಾರಿ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಶಾಸಕ ಎಚ್.ಟಿ.ಮಂಜು ಒತ್ತಾಯಿಸಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ನಿರ್ದೇಶನ, ಜಿಪಂ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೆ.15ರಂದು ತೆಂಡೆಕೆರೆ ಗ್ರಾಪಂನ ಬಳ್ಳೇಕೆರೆ ಗ್ರಾಮದ ನೀರಗಂಟೆ ಗಿರಿಜಾ ಸೇರಿದಂತೆ ನೂರಾರು ನೌಕರರು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದರು.

ನಂತರ ಬಸ್ ಮೂಲಕ ತೆಂಡೆಕೆರೆಗೆ ಬಂದು ನಂತರ ಸ್ವಗ್ರಾಮಕ್ಕೆ ಹುಣಸನಹಳ್ಳಿಯ ನೀರಗಂಟಿ ಪ್ರಭಾವತಿ ಅವರೊಂದಿಗೆ ಸ್ಕೂಟರ್‌ನಲ್ಲಿ ಹಿಂಭಾಗ ಕುಳಿತು ತೆರಳುತ್ತಿದ್ದ ವೇಳೆ ಅಂಚೆಮುದ್ದನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿ ತಲೆಗೆ ಏಟು ಬಿದ್ದು ಸ್ಥಳದಲ್ಲಿಯೇ ಮೃತರಾಗಿದ್ದಾರೆ ಎಂದರು.

ಸ್ಕೂಟರ್ ಚಾಲನೆ ಮಾಡುತ್ತಿದ್ದ ಪ್ರಭಾವತಿ ಅವರಿಗೂ ತೀವ್ರ ಸ್ವರೂಪದ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿರಿಜಾ ಅವರಿಗೆ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ ಎಂದರು.

ಅಪಘಾತವಾದ ಸ್ಥಳದ ಮಾರ್ಗದಲ್ಲಿ ನಾನೂ ಸಹ ಬಂದ ವೇಳೆ ಸ್ಥಳದಲ್ಲಿಯೇ ಇದ್ದ 112 ಸಿಬ್ಬಂದಿಗೆ ಸೂಚಿಸಿದೆ. ಕೆ.ಆರ್.ಪೇಟೆ ಕಡೆಯಿಂದ ಬಂದ ಬೈಕ್‌ಅನ್ನು ಸಮೀಪದ ಬ್ಯಾಂಕ್ ಮತ್ತು ಗ್ರಾಪಂ ಮತ್ತು ಚಿನಕುರುಳಿ ಬಳಿ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅಪಘಾತ ಮಾಡಿದವರನ್ನು ಹುಡುಕಿ ಎಂದು ಸೂಚಿಸಿದ್ದೇನೆ ಎಂದರು.

ಆದರೂ ಈ ಬಗ್ಗೆ ಯಾವುದೇ ತನಿಖೆ ಮತ್ತು ಅಪಘಾತ ಮಾಡಿದವರನ್ನು ಹುಡುಕುವ ಗೋಜಿಗೆ ಹೋಗದಿರುವ ಪೊಲೀಸರ ಕ್ರಮವನ್ನು ಶಾಸಕ ಮಂಜು ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲಾ ಎಸ್ಪಿ ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚನೆ ನೀಡಿ ಅಪರಾಧಿಗಳನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಮಾನವೀಯತೆ ಮೆರೆಯಲಿ:

ಗಿರಿಜಾ ಅವರ ಮರಣದಿಂದ ಕುಟುಂಬಕ್ಕೆ ತಂದೆ-ತಾಯಿಗಳು, ಅಜ್ಜಿತಾತ ಇಲ್ಲದೆ ಅನಾಥವಾಗಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಘಟನೆ ಬಗ್ಗೆ ಪರಾಮರ್ಶಿಸಿ ಅನಾಥ ಕುಟುಂಬದ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಸರ್ಕಾರಿ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮೃತ ಗಿರಿಜಾ ಅವರ ಪತಿ ಒಂದು ವರ್ಷದ ಹಿಂದೆ ಅಕಾಲಿಕವಾಗಿ ಮರಣ ಹೊಂದಿದ್ದರು. ಅಲ್ಲದೇ, ಅಜ್ಜಿ ಭಾಗ್ಯಮ್ಮ ದೊಡ್ಡಪ್ಪ ಕೂಡ ಈ ಹಿಂದೆಯೇ ಮೃತಪಟ್ಟಿದ್ದಾರೆ. ಈಗ ಗಿರಿಜಾರ ಇಬ್ಬರು ಮಕ್ಕಳಿಗೆ ಸರ್ಕಾರ ಸೂಕ್ತ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಹೋಬಳಿ ಜೆಡಿಎಸ್ ಅಧ್ಯಕ್ಷರಾದ ರವಿಕುಮಾರ್, ಡಿ.ಪಿ.ಸ್ವಾಮಿಗೌಡ, ಬಸವಲಿಂಗಪ್ಪ, ಟಿಎಪಿಸಿಎಂಎಸ್ ನಿರ್ದೇಶಕರಾದ ದಿನೇಶ್, ಮಂಜುನಾಥ್, ಬಲದೇವ್, ತಾಪಂ ಮಾಜಿ ಸದಸ್ಯ ಮೋಹನ್, ಜೆಡಿಎಸ್ ಮುಖಂಡರಾದ ಬೇಲದಕೆರೆ ನಂಜಪ್ಪ, ಜೈನಹಳ್ಳಿ ದಿನೇಶ್ ಸೇರಿದಂತೆ ಹಲವರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌