ನರಗುಂದ: ಪಟ್ಟಣದ ಹರಣಶಿಕಾರಿ, ಘಂಟಿಚೋರ ಜನಾಂಗಕ್ಕೆ ಸ್ವಂತ ಸೂರು, ನಿವೇಶನ, ಉದ್ಯೋಗ, ಉನ್ನತ ಶಿಕ್ಷಣ, ಶುಚಿತ್ವ, ಕುಡಿಯಲು ಶುದ್ಧ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಪರಿಶಿಷ್ಟ ಜಾತಿ, ಪ.ಪಂಗಡ, ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಪಲ್ಲವಿ ಜಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮನುಷ್ಯರೇ ಅಲ್ಲ ಎಂಬಂತೆ ಪ್ರತಿಕ್ಷಣವೂ ಆತಂಕ, ಅಭದ್ರತೆ, ಶಿಕ್ಷಣ, ಉದ್ಯೋಗ, ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ರಾಜ್ಯದ ಅಲೆಮಾರಿ ಜನಾಂಗದವರನ್ನು ಮುಖ್ಯ ವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲೆಮಾರಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರ ಸದುಪಯೋಗ ಅರ್ಹರಿಗೆ ಸರಿಯಾಗಿ ತಲುಪಲಿ ಎಂದರು.
ಬೋರ್‌ವೆಲ್ ನೀರು ಸೇವಿಸಿ ಅಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿರುವ ಶಾಲಾ ಮಕ್ಕಳಿಗೆ ಒಂದು ತಿಂಗಳೊಳಗೆ ಸ್ಥಳೀಯ ಪುರಸಭೆ, ಶಿಕ್ಷಣ ಇಲಾಖೆಯಿಂದ ಶುದ್ಧ ಕುಡಿಯುವ ನೀರು, ಸೋರುತ್ತಿರುವ ಚಾವಣಿ ದುರಸ್ತಿಪಡಿಸಿರುವ ಬಗ್ಗೆ ಭಾವಚಿತ್ರ ಸಮೇತ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು ಹಾಗೂ ಅವರ ಪೋಷಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರಲ್ಲಿಯೂ ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಿಕ್ಷಣ ಇಲಾಖೆಯಿಂದ ಅಲೇಮಾರಿ ಜನಾಂಗದ ಮಕ್ಕಳು ಮತ್ತು ಅವರ ಪೋಷಕರಿಗೆ ರಾತ್ರಿ ಶಾಲೆ ಪ್ರಾರಂಭಿಸಿ ಶಿಕ್ಷಣದ ಮಹತ್ವ ತಿಳಿಸಿಕೊಡುವುದರ ಜತೆಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ರಾಜ್ಯದ ಎಲ್ಲ ಜಿಲ್ಲೆಗಳಿಗೆ ನರಗುಂದ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಸಿಡಿಪಿಒ ಕಮಲಾ ಹುಲಕೋಟಿ, ಬಿಇಒ ಡಾ. ಗುರುನಾಥ ಹೂಗಾರ ಅವರಿಗೆ ಸೂಚಿಸಿದರು.