ವಿಕಲಚೇತನ ಮಕ್ಕಳಿಗೆ ಸರ್ಕಾರದ ಸೌಲಭ್ಯ ತಲುಪಿಸಿ: ಶಾಸಕ ಪ್ರಭು ಚವ್ಹಾಣ್‌

KannadaprabhaNewsNetwork |  
Published : Sep 03, 2025, 01:00 AM IST
ಚಿತ್ರ 2ಬಿಡಿಆರ್‌2ಔರಾದ್‌ ತಾಲೂಕು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಪ್ರಭು ಚವ್ಹಾಣ್‌ ಮಾತನಾಡಿದರು. | Kannada Prabha

ಸಾರಾಂಶ

ವಿಕಲಚೇತನರ ಹಿತಾಸಕ್ತಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲ ಕಲ್ಯಾಣ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ವಿಕಲಚೇತನ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಾಜಿ ಸಚಿವರು ಹಾಗೂ ಔರಾದ್‌ (ಬಿ) ಶಾಸಕರಾದ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ವಿಕಲಚೇತನರ ಹಿತಾಸಕ್ತಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲ ಕಲ್ಯಾಣ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ವಿಕಲಚೇತನ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಾಜಿ ಸಚಿವರು ಹಾಗೂ ಔರಾದ್‌ (ಬಿ) ಶಾಸಕರಾದ ಪ್ರಭು ಚವ್ಹಾಣ್‌ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಯೋಜನೆಯಡಿ ಸಮನ್ವಯ ಶಿಕ್ಷಣ ವಿಭಾಗದಿಂದ ಸೆ. 2ರಂದು ಔರಾದ್‌ (ಬಿ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಮತ್ತು ಶಿಕ್ಷಕರಿಂದ ಆಗಬೇಕು. ಮಕ್ಕಳು ತಮ್ಮಲ್ಲಿನ ದೌರ್ಬಲ್ಯಗಳ ಬಗ್ಗೆ ತಲೆಕೆಡಿಸಿ ಕೊಳ್ಳದೇ ಸಾಧನೆಯತ್ತ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದಿಂದ ಇರುವ ಯೋಜನೆಗಳ ಬಗ್ಗೆ ತಿಳಿದುಕೊಂಡು ಸೌಲಭ್ಯಗಳನ್ನು ಪಡೆಯಲು ಯತ್ನಿಸಬೇಕು ಎಂದು ಹೇಳಿದರು.

ವಿಕಲಚೇತನ ಮಕ್ಕಳಿಗೆ ವಿಶೇಷ ಗಮನ ಹರಿಸಿ ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಈ ದಿಶೆಯಲ್ಲಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ವಿಕಲಚೇತನರು ಯಾವುದೇ ರೀತಿಯ ಸಮಸ್ಯೆಯಿರಲಿ ನೇರವಾಗಿ ತಮ್ಮನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದ ಅವರು ಪಾಲಕರು ಕೂಡ ತಮ್ಮ ವಿಕಲಚೇತನ ಮಕ್ಕಳಿಗೆ ತಾತ್ಸಾರ ದಿಂದ ಕಾಣದೇ ತಪ್ಪದೆ ಶಾಲೆಗೆ ಕಳುಹಿಸಬೇಕು. ವಿಶೇಷ ಗುರುತಿನ ಚೀಟಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳ ಲಾಭ ಪಡೆಯಬೇಕು ಎಂದು ಶಾಸಕ ಪ್ರಭು ಚವ್ಹಾಣ್‌ ಮನವಿ ಮಾಡಿದರು.

ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ಡಾ.ಶಾಲಿವಾನ ಉದಗೀರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದಲೇ ಯುಡಿಐಡಿ ಕಾರ್ಡ್‌ ಮಾಡಿಸಿ ವಿದ್ಯಾರ್ಥಿ ವೇತನ, ಸಾಧನ ಸಲಕರಣೆ ವಿತರಣೆಯಂತಹ ಎಲ್ಲ ಯೋಜನೆಗಳನ್ನು ತಲುಪಿಸುವ ಕೆಲಸ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ 2024-25ನೇ ಸಾಲಿನಲ್ಲಿ ನಡೆದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಆಯ್ಕೆಯಾಗಿರುವ ವಿವಿಧ ನ್ಯೂನತೆಯ 75 ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಗಾಲಿ ಕುರ್ಚಿ, ತ್ರಿಚಕ್ರ ವಾಹನ, ಶ್ರವಣ ಸಾಧನಗಳು, ಕಣ್ಣಿಗೆ ಸಂಬಂಧಿಸಿದ ಸಲಕರಣೆಗಳು ಸೇರಿದಂತೆ 285 ವಿಧದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್‌ ಪಾಟೀಲ್‌, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ರಂಗೇಶ, ಸಮನ್ವಯಾಧಿಕಾರಿ ಪ್ರಕಾಶ ರಾಥೋಡ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ಮುಖಂಡರಾದ ಶಿವರಾಜ ಅಲ್ಮಾಜೆ, ಸಚಿನ ರಾಠೋಡ, ಕೇರಬಾ ಪವಾರ, ಗುಂಡಪ್ಪ ಮುಧಾಳೆ, ಸಂಜು ವಡೆಯರ, ಪ್ರದೀಪ ಪವಾರ್‌, ಅಶೋಕ ಶಂಬೆಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್‌, ರಮೇಶ ಡೊಂಬಾಳೆ, ಯಶವಂತರಾವ್‌ ಡೊಂಬಾಳೆ, ಸಿಆರ್‌ಪಿ, ಬಿಆರ್‌ಪಿ ಇಸಿಒ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ