ಕುರಿ, ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಸಭೆ
ಜಿಲ್ಲೆಯ ಕುರಿಗಾರರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ತಲುಪಿಸಲು ಪಶು ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಸೋಮವಾರ ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕುರಿಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.ಕುರಿ-ಮೇಕೆ ಸಾಕಾಣಿಕೆಗೆ ಮತ್ತು ಕುರಿಗಾರರಿಗೆ ಸರ್ಕಾರವು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ, ಸಹಾಯಧನ ಸೌಲಭ್ಯ, ಅಗತ್ಯ ಪರಿಕರಗಳ ವಿತರಣೆ ಮತ್ತು ಜಾನುವಾರುಗಳಿಗೆ ಲಸಿಕೆ ಹೀಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಜಿಲ್ಲೆಯ ಕುರಿಗಾರರಿಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಮಾಣ ಶೇ. 100 ಆಗಬೇಕು ಮತ್ತು ಸೌಲಭ್ಯ ವಿತರಣೆಯಲ್ಲೂ ಜಿಲ್ಲೆಯ ಪ್ರಗತಿ ಹೆಚ್ಚಾಗಬೇಕು. ಬಹಳಷ್ಟು ಕುರಿಗಾರರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹೇಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂಬುದು ತಿಳಿದಿರುವುದಿಲ್ಲ ಎಂದರು.
ಜಿಲ್ಲೆಯ ಕುರಿಗಾರರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಈ ಹಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕುರಿಗಾರರ ಸಂಘಗಳ ಸಹಕಾರದೊಂದಿಗೆ ಕುರಿಗಾರರ ಮಕ್ಕಳ ಶಿಕ್ಷಣದ ಸ್ಥಿತಿಗತಿಗಳ ಬಗ್ಗೆ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿರುವ ಪಶು ವೈದ್ಯರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ರೀತಿಯಲ್ಲಿ ಜಿಲ್ಲೆಯ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಪಶು ವೈದ್ಯಾಧಿಕಾರಿಗಳ ಸೇವೆಯನ್ನು ತ್ವರಿತವಾಗಿ ಪಡೆದುಕೊಳ್ಳುವಂತೆ ಸೂಚಿಸಿದರು.
ಗಂಗಾವತಿಯ ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸಿಇಒ ಕೆ.ಬಿ. ಜೂಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಡಾ. ಆನಂದ ದೇವರನಾವದಗಿ ಮಾತನಾಡಿದರು.