ಬ್ಯಾಡಗಿ: ಹುಟ್ಟಿದ ಮಗು ಅಂಗವಿಕಲರಾಗುವುದು ಪೂರ್ವ ಜನ್ಮದ ಕರ್ಮದ ಫಲವಾಗಿದೆ ಎನ್ನುವಂತಹ ಮೌಢ್ಯವೊಂದು ಎಲ್ಲೆಡೆ ಹರಿದಾಡುತ್ತಿದೆ. ಅಂಗವಿಕಲರು ಯಾವುದೇ ಕಾರಣಕ್ಕೂ ಸರ್ಕಾರ, ಸಮಾಜ ಹಾಗೂ ಕುಟುಂಬಗಳಿಂದ ದೂರ ಉಳಿಯಬಾರದು ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಅಂಗವಿಕಲರ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಏರ್ಪಡಿಸಿದ್ದ ಅಂಗವಿಕಲರ ಸುಗಮಯಾತ್ರೆ ಕಾರ್ಯಕ್ರಮಕ್ಕೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಂಗವೈಕಲ್ಯತೆಗೂ ವೈಜ್ಞಾನಿಕ ಕಾರಣಗಳಿವೆ. ಆದರೆ ಇದನ್ನು ಅರ್ಥೈಸಿಕೊಳ್ಳದ ಕೆಲವರು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಇದರಿಂದ ಅಂಗವಿಕಲರ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದರು.ಅಂಗವಿಕಲರಲ್ಲಿ ಶಾಶ್ವತ ದೃಷ್ಟಿಹೀನತೆ(ಕುರುಡು) ಹೆಚ್ಚು ದುರುಪಯೋಗವಾಗುತ್ತಿದೆ. ಇಂತಹ ವ್ಯಕ್ತಿಗಳನ್ನು ಅಪಹರಿಸಿ ಭಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ಕುಟುಂಬಸ್ಥರು ಕಾಟಾಚಾರದ ಹುಡುಕಾಟ ನಡೆಸಿ ಪೀಡೆಯೊಂದು ತೊಲಗಿತು ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಇವೆಲ್ಲವುಗಳನ್ನೂ ಮಾನವೀಯ ಮೌಲ್ಯಗಳಡಿಯಲ್ಲಿ ಸರ್ಕಾರ ಹಾಗೂ ಸಮಾಜ ಪರಗಣಿಸಬೇಕಾಗುತ್ತದೆ ಎಂದ ಅವರು, ಪುನರ್ವಸತಿ ಕಲ್ಪಿಸುವ ಹೊಣೆಗಾರಿಕೆ ತೋರಬೇಕಾಗುತ್ತದೆ ಎಂದರು.ಮೂಲ ಸೌಕರ್ಯಕ್ಕಾಗಿ ಹುಡುಕಾಟ: ಅಂಗವಿಕಲರಿಗೆ ಅವಶ್ಯವಿರುವ ಮೂಲ ಸೌಕರ‍್ಯಗಳು ಸೇರಿದಂತೆ ಅನುಕೂಲತೆಗೆ ತಕ್ಕಂತೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಸುಗಮಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತನ್ಮೂಲಕ ಯಾವುದೇ ಅರ್ಜಿ ಪರಿಗಣಿಸದೇ ಸ್ಥಳದಲ್ಲೇ ನಿರ್ಧಾರ ಕೈಗೊಂಡು ಅನುಕೂಲತೆ ಕಲ್ಪಿಸಲಾಗುವುದು ಎಂದರು.ಕಡಿವಾಣ ಹಾಕಿ: ವಿಕಲಚೇತನ ಸಂಘದ ಅಧ್ಯಕ್ಷ ಪಾಂಡು ಸುತಾರ ಮಾತನಾಡಿ, ತಾಲೂಕಿನಲ್ಲಿ ಸುಳ್ಳು ಪ್ರಮಾಣಪತ್ರದ ಹಾವಳಿ ಮೀತಿ ಮೀರಿ ನಡೆಯುತ್ತಿದೆ. ಹಣ ಕೊಟ್ಟರೆ ಸಾಕು, ನ್ಯೂನತೆಗಳು ಇಲ್ಲದವರಿಗೂ ಪ್ರಮಾಣಪತ್ರ ದೊರೆಯುತ್ತಿದೆ. ಕೂಡಲೇ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಪಡೆದವರು ಹಾಗೂ ಕೊಟ್ಟವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು. ಅನುದಾನ ದುರ್ಬಳಕೆ: ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಅನುದಾಗಳನ್ನು ಬೇರೆ ಕಾರಣಕ್ಕೆ ದುರ್ಬಳಕೆ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಇದನ್ನು ಸಂಘವು ಖಂಡಿಸುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಅಂಗವಿಕಲರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹಾಧಿಕಾರಿ ಎಂ.ಎಫ್. ಹುಳ್ಯಾಳ, ಪ್ರಕಾಶ ಹಿರೇಮಠ, ಪಿಡಿಒ ಗೋಪಾಲಸ್ವಾಮಿ, ಎಂಆರ್‌ಡಬ್ಲ್ಯು ನಾಗರಾಜ ಅಗಸನಹಳ್ಳಿ, ಗಣೇಶ ಬಡಿಗೇರ, ಶಾಂತಾ ಪಟ್ಟಣಶೆಟ್ಟಿ, ತಿರುಕಪ್ಪ ಮುಳುಗುಂದ, ಪ್ರಕಾಶ್ ಡಿಸ್ಲೇ, ಚಂದ್ರಶೇಖರ್ ಮಳೇಮಠ ವಿಆರ್‌ಡಬ್ಲ್ಯುಗಳು ಹಾಗೂ ಮಹಿಳಾ ಸಂಘಟನೆಗಳು ಪಾಲ್ಗೊಂಡಿದ್ದರು.