ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಂತೆ ಮಾಜಿ ಶಾಸಕ ಆರ್.ನರೇಂದ್ರ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಲ್ಮೀಕಿ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವಂತೆ ಮಾಜಿ ಶಾಸಕ ಆರ್. ನರೇಂದ್ರ ಅವರು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ವಸತಿಗೃಹದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಮುದಾಯದ ಮುಖಂಡರ ಜೊತೆಗೂಡಿ ಮನವಿ ಸಲ್ಲಿಸಿದರು. ನಂತರ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ, ಬಂಡಳ್ಳಿ, ಕೌದಳ್ಳಿ, ದೊಡ್ಡಿಂದುವಾಡಿ, ಉದ್ದನೂರು, ಕೊಳ್ಳೇಗಾಲ ಟೌನ್ ವ್ಯಾಪ್ತಿಯಲ್ಲಿ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಗಿದೆ. 2013ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಿದ್ದರು. ಬಿಡುಗಡೆಯಾಗಿದ್ದ ಅನುದಾನದಲ್ಲಿ ಹಲವು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಶೌಚಾಲಯ, ಅಡುಗೆ ಮನೆಗೆ ಸೇರಿದಂತೆ ಮುಂದುವರೆದ ಕಾಮಗಾರಿಗಳು ಮಾಡಲು ಅನುದಾನದ ಅಗತ್ಯವಿದೆ. ಪಾಳ್ಯ ಗ್ರಾಮಕ್ಕೆ 80 ಲಕ್ಷ ಉದ್ದನೂರು ಗ್ರಾಮಕ್ಕೆ 50 ಲಕ್ಷ, ಬಂಡಳ್ಳಿ 75 ಲಕ್ಷ,ಕೌದಳ್ಳಿ 2.5 ಕೋಟಿ, ದೊಡ್ಡಿಂದುವಾಡಿ ಗ್ರಾಮಕ್ಕೆ 15 ಲಕ್ಷ ಅನುದಾನದ ಅಗತ್ಯವಿದ್ದು ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿಸುವಂತೆ ಮನವಿ ಸಲ್ಲಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪರಿಶಿಷ್ಟ ಪಂಗಡ ಇಲಾಖೆಯು ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಅತಿ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಚರ್ಚೆ ನಡೆಸಿ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡಿ:
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದಲ್ಲಿ ಸುಮಾರು 600 ವರ್ಷಗಳ ಇತಿಹಾಸವುಳ್ಳ ಮಾರಮ್ಮನ ದೇವಸ್ಥಾನವಿದ್ದು, ಕಟ್ಟಡ ಶಿಥಿಲ ಗೊಂಡಿರುವುದರಿಂದ ಹೊಸದಾಗಿ ದೇವಸ್ಥಾನ ನಿರ್ಮಾಣ ಮಾಡಲು ಗ್ರಾಮಸ್ಥರು ಹಾಗೂ ಸುತ್ತಲಿನ ಭಕ್ತಾದಿಗಳು ಇಚ್ಛಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ದೇವಸ್ಥಾನ ನಿರ್ಮಾಣ ಮಾಡಲು 89 ಲಕ್ಷ ವೆಚ್ಚದಲ್ಲಿ ಕ್ರಿಯಾಯೋಜನೆ ಮಾಡಲಾಗಿದೆ. ಆದ್ದರಿಂದ ಅನುದಾನ ಬಿಡುಗಡೆ ಮಾಡಿಕೊಡುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಮಾಜಿ ಶಾಸಕ ಆರ್ ನರೇಂದ್ರ ಮನವಿ ಸಲ್ಲಿಸಿದರು. ಸಚಿವ ರಾಮಲಿಂಗ ರೆಡ್ಡಿ ಅವರು ಸತ್ತೇಗಾಲ ಗ್ರಾಮದ ಮಾರಮ್ಮ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಹಂತ ಹಂತವಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಖಂಡರಾದ ಪಾಳ್ಯ ಕೃಷ್ಣ, ಜಗದೀಶ್ ನಾಯ್ಕ ದೊಡ್ಡ ನಾಯಕ,ಧನಗೆರೆ ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.