ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಕಾರ ಮುಖ್ಯ: ನ್ಯಾ. ಪ್ರಶಾಂತ್ ನಾಗಲಾಪುರ

KannadaprabhaNewsNetwork |  
Published : Jun 01, 2025, 02:57 AM IST
31ಎಚ್‌ಪಿಟಿ2- ಹೊಸಪೇಟೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ ಚಾಲನೆ ನೀಡಿದರು. ಡಿಎಚ್‌ಒ ಡಾ. ಎಲ್‌.ಆರ್‌. ಶಂಕರ ನಾಯ್ಕ ಮತ್ತಿತರರಿದ್ದರು. | Kannada Prabha

ಸಾರಾಂಶ

ದುಶ್ಚಟಗಳಿಗೆ ದಾಸರಾಗುವ ಮುನ್ನ ನಿಮ್ಮ ಜೀವ ಮತ್ತು ಜೀವನದ ಮೌಲ್ಯ ಅರಿತರೇ ತಂಬಾಕು ಉತ್ಪನ್ನಗಳಿಂದ ದೂರವಿರಲು ಸಾಧ್ಯ.

ಜಾಗೃತಿ ಜಾಥಾಕ್ಕೆ ಸ್ಥಳೀಯ ನ್ಯಾಯಾಧೀಶ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ದುಶ್ಚಟಗಳಿಗೆ ದಾಸರಾಗುವ ಮುನ್ನ ನಿಮ್ಮ ಜೀವ ಮತ್ತು ಜೀವನದ ಮೌಲ್ಯ ಅರಿತರೇ ತಂಬಾಕು ಉತ್ಪನ್ನಗಳಿಂದ ದೂರವಿರಲು ಸಾಧ್ಯ. ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಸ್ಥಳೀಯ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ತಂಬಾಕು ಮತ್ತು ನಿಕೋಟಿನಂತಹ ಉತ್ಪನ್ನಗಳಿಗೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತದಲ್ಲಿ ಸುಮಾರು 26.7 ಕೋಟಿಗೂ ಅಧಿಕ ಜನ ತಂಬಾಕು ಬಳಕೆದಾರರಿದ್ದು, ಪ್ರತಿ ವರ್ಷ 13.5 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳಿಂದ ಸಾವಿಗೀಡಾಗಿದ್ದಾರೆ. ವಿಪರ್ಯಾಸವೆಂದರೇ ಶೇ.47.6 ರಷ್ಟು ತಂಬಾಕು ಬಳಕೆದಾರರು ಗ್ರಾಮೀಣ ಪ್ರದೇಶದವರಾಗಿದ್ದು, ಕರ್ನಾಟಕದಲ್ಲಿ ಶೇ.22.8 ರಷ್ಟು ವ್ಯಕ್ತಿಗಳು ಯಾವುದಾದರೊಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದಾರೆ. ಆರೋಗ್ಯಕರ ಜೀವನ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರು ತಂಬಾಕು ಉತ್ಪನ್ನಗಳ ಕರಾಳ ಉದ್ದೇಶಗಳನ್ನು ಅರಿತುಕೊಳ್ಳಬೇಕು ಎಂದರು.

ನ್ಯಾಯಾಧೀಶೆ ಶ್ರುತಿ ತೇಲಿ ಮಾತನಾಡಿ, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಆಕರ್ಷಣೀಯ ಜಾಹೀರಾತುಗಳು ಜನರ ದಿಕ್ಕು ತಪ್ಪಿಸುತ್ತಿವೆ. ಚಿತ್ರನಟರೇ ಗುಟ್ಕಾ, ತಂಬಾಕು ಕಂಪನಿಗಳ ರಾಯಭಾರಿಯಾಗಿದ್ದಾರೆ. ಇದು ಸಾರ್ವಜನಿಕರ ಮೇಲೆ ತುಂಬಾ ಪ್ರಭಾವ ಮೂಡಿಸುತ್ತದೆ. ಮಹಿಳೆಯರು, ಮಕ್ಕಳು ತಂಬಾಕು, ಗುಟ್ಕಾದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಶೋಚನೀಯ ಎಂದರು.

ಇದಕ್ಕೂ ಮುನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಿಂದ ವಿವಿಧ ಪ್ರಮುಖ ಬೀದಿಗಳಲ್ಲಿ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಇದೇ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಲ್‌.ಆರ್‌. ಶಂಕರ ನಾಯ್ಕ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ ತಂಬಾಕು ನಿಯಂತ್ರಣ ಮಾಡುವಂತೆ ಪ್ರತಿಜ್ಞಾ ವಿಧಿ ಭೋದಿಸಿದರು.

ಜಾಥಾದಲ್ಲಿ ಆರ್‌ಸಿಎಚ್‌ ಅಧಿಕಾರಿ ಡಾ. ಬಿ. ಜಂಬಯ್ಯ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಅಧಿಕಾರಿ ಡಾ. ಭಾಸ್ಕರ್, ವೈದ್ಯಾಧಿಕಾರಿ ಡಾ. ವಿನೋದ ಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ, ಜಿಲ್ಲಾ ಕುಷ್ಠರೋಗದ ನಿಯಂತ್ರಣ ಅಧಿಕಾರಿ ಡಾ. ರಾಧಿಕಾ, ತಾಲೂಕು ಆರೋಗ್ಯ ಅಧಿಕಾರಿ ಡಾ. ಬಸವರಾಜ, ತಂಬಾಕು ನಿಯಂತ್ರಣ ಕೋಶದ ಸಂಯೋಜಕ ಮಹಾಂತೇಶ್ ಬಿ. ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಸೇರಿದಂತೆ ಶ್ರೀಸಪ್ತಗಿರಿ ವಿದ್ಯಾಲಯದ ನರ್ಸಿಂಗ್‌ ವಿದ್ಯಾರ್ಥಿಗಳು, ಟಿಎಂಎಇ ಸಂಸ್ಥೆಯ ನರ್ಸಿಂಗ್‌ ವಿದ್ಯಾರ್ಥಿಗಳು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ ವಿಶ್ವವಿದ್ಯಾಲಯ ಟ್ರಸ್ಟ್‌ ನ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ