ತಮಿಳು ನಟ ಕಮಲ್ ಹಾಸನ್ ಹೇಳಿಕೆ ಮೂರ್ಖತನದ್ದು: ವೇಣು

KannadaprabhaNewsNetwork |  
Published : Jun 01, 2025, 02:54 AM IST
೩೦ಕೆಎಂಎನ್‌ಡಿ-೩ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿರುವ ಕಮಲ್ ಹಾಸನ್ ಯಾವ ಭಾಷಾ ಸಂಶೋಧನೆಯಿಂದ ಈ ಸತ್ಯವನ್ನು ಕಂಡುಕೊಂಡಿದ್ದಾರೆಂದು ಹೇಳಬೇಕಲ್ಲವೇ. ಯಾವ ವಿಶ್ವವಿದ್ಯಾಲಯದಲ್ಲಿ ಪಡೆದ ಪಾಂಡಿತ್ಯದಿಂದ ಈ ಹೇಳಿಕೆ ನೀಡಿದ್ದಾರೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಮಹತ್ವ, ಘನತೆ, ಗೌರವಗಳಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಭಾಷೆ ಕುರಿತಂತೆ ಕಮಲ್ ಹಾಸನ್ ಆಡಿರುವ ಮಾತುಗಳು ಮೂರ್ಖತನದ್ದು. ಆತ ಒಬ್ಬ ಕಲಾವಿದ ಅಷ್ಟೇ, ಭಾಷಾ ಪಂಡಿತನೋ, ಭಾಷಾ ತಜ್ಞನೇನಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ) ಜಿಲ್ಲಾಧ್ಯಕ್ಷ ವೇಣು ಕಿಡಿಕಾರಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಕನ್ನಡ ವಿರೋಧಿ ಹೇಳಿಕೆ ನೀಡಿರುವ ಕಮಲ್ ಹಾಸನ್ ಅವರ ಪ್ರತಿಕೃತಿ ದಹಿಸುವ ಮೂಲಕ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿರುವ ಕಮಲ್ ಹಾಸನ್ ಯಾವ ಭಾಷಾ ಸಂಶೋಧನೆಯಿಂದ ಈ ಸತ್ಯವನ್ನು ಕಂಡುಕೊಂಡಿದ್ದಾರೆಂದು ಹೇಳಬೇಕಲ್ಲವೇ. ಯಾವ ವಿಶ್ವವಿದ್ಯಾಲಯದಲ್ಲಿ ಪಡೆದ ಪಾಂಡಿತ್ಯದಿಂದ ಈ ಹೇಳಿಕೆ ನೀಡಿದ್ದಾರೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಮಹತ್ವ, ಘನತೆ, ಗೌರವಗಳಿವೆ. ಕಲಾವಿದನಾಗಿ ಅದಕ್ಕೆ ಚ್ಯುತಿ ತರುವ ಕೆಲಸ ಮಾಡಬಾರದು. ಕನ್ನಡಿಗರು ಎಷ್ಟೇ ದೌರ್ಜನ್ಯ ಮಾಡಿದರೂ ಸಹಿಸಿಕೊಳ್ಳುತ್ತಾರೆಂಬ ಇಂತಹ ಅಹಂಕಾರದ ಮಾತುಗಳನ್ನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಮಲ್ ಹಾಸನ್ ಮಾತುಗಳನ್ನು ವಿರೋಧಿಸದ ಶಿವರಾಜ್‌ಕುಮಾರ್, ರಮ್ಯಾ ಅವರನ್ನು ಕನ್ನಡಿಗರು ಎಂದು ಹೇಳುವುದಕ್ಕೆ ನಾಚಿಕೆಯಾಗುತ್ತದೆ. ಡಾ.ರಾಜ್‌ಕುಮಾರ್ ಇಂತಹ ಮಾತುಗಳನ್ನು ಕೇಳಿದ್ದರೆ ಸ್ಥಳದಲ್ಲೇ ಖಂಡಾತುಂಡವಾಗಿ ವಿರೋಧಿಸುತ್ತಿದ್ದರು. ಅಷ್ಟರಮಟ್ಟಿಗೆ ಭಾಷೆಯನ್ನು ರಾಜ್ ಪ್ರೀತಿಸುತ್ತಿದ್ದರು. ಇವತ್ತಿನ ಕಲಾವಿದರಲ್ಲಿ ಭಾಷಾ ಪ್ರೇಮಕ್ಕಿಂತಲೂ, ವೈಯಕ್ತಿಕ, ವ್ಯಾವಹಾರಿಕ ಪ್ರೇಮವೇ ಹೆಚ್ಚಾಗಿರುವುದರಿಂದ ಕನ್ನಡದ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.

ಕನ್ನಡ ಭಾಷೆಗೆ ಅವಮಾನ ಮಾಡಿರುವ ತಮಿಳು ಚಿತ್ರ ನಟ ಕಮಲ್ ಹಾಸನ್ ಅವರ ಥಗ್ಸ್ ಲೈಫ್ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು. ಜೊತೆಗೆ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹ ಇಂತಹ ಲಜ್ಜೆಗೇಡಿತನದ ಹೇಳಿಕೆಯಿಂದ ಕನ್ನಡಿಗರಿಗೆ ನೋವುಂಟಾಗಿದೆ. ತಕ್ಷಣ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಮುಖಂಡರಾದ ಸುಜಾತ ಕೃಷ್ಣ, ಮಾ.ಸೋ.ಚಿದಂಬರ್, ಜೈಶಂಕರ್, ಅಶೋಕ್, ಭಾರತಿ, ಶಂಕರೇಗೌಡ, ರಾಮಚಂದ್ರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ