ಕನ್ನಡಪ್ರಭ ವಾರ್ತೆ ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಶುಕ್ರವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೊಂದ ಕುಟುಂಬಗಳಿಗೆ ಇನ್ನೂ ಸಹ ಮನೆ ಕಲ್ಪಿಸಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ತಹಸೀಲ್ದಾರರ ಹಂತದಲ್ಲಿ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅರ್ಹರಿಗೆ ಮನೆ ಕೊಡಿಸಲು ಮುಂದಾಗಬೇಕು. ಇದನ್ನು ಪ್ರಥಮ ಆದ್ಯತೆಯಲ್ಲಿ ನಿರ್ವಹಿಸುವಂತೆ ತಹಸೀಲ್ದಾರರಿಗೆ ಲೋಕಾಯುಕ್ತ ಡಿವೈಎಸ್‌ಪಿ ಸಲಹೆ ಮಾಡಿದರು.
ಕೆಲವು ಕಡೆಗಳಲ್ಲಿ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಸರ್ವೇ ಮಾಡಿ ಸಾರ್ವಜನಿಕರ ದೂರುಗಳನ್ನು ಪರಿಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ತಹಸೀಲ್ದಾರರು ಮತ್ತು ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಇಂತಹ ಭೂ ಒತ್ತುವರಿ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಪವನ್ ಕುಮಾರ್ ಹೇಳಿದರು.ಕೆಲವು ಕಡೆ ರಸ್ತೆ, ಮತ್ತೊಂದು ಕಡೆಗಳಲ್ಲಿ ಪಾರ್ಕಿಂಗ್ ಬಿಡಿಸಬೇಕು ಹೀಗೆ ಹಲವು ರೀತಿಯ ಭೂ ಒತ್ತುವರಿ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ವಿವರಿಸಿದರು.
ಯಾವುದೇ ಕಚೇರಿಯಲ್ಲಿ ಕಚೇರಿ ಮುಖ್ಯಸ್ಥರಲ್ಲಿ ಮನವಿ ಮಾಡಿದರೆ ಕಾಲಮಿತಿಯಲ್ಲಿ ತಮ್ಮ ಮನವಿಗೆ ಸ್ಪಂದನೆ ದೊರೆಯಲಿದೆ. ಆ ನಿಟ್ಟಿನಲ್ಲಿ ಕಚೇರಿ ಮುಖ್ಯಸ್ಥರನ್ನು ನೇರವಾಗಿ ಸಂಪರ್ಕಿಸುವುದನ್ನು ಮನವಿದಾರರು ರೂಢಿಸಿಕೊಳ್ಳಬೇಕು ಎಂದು ಪವನ್ ಕುಮಾರ್ ಸಲಹೆ ನೀಡಿದರು.
ತಾ.ಪಂ.ಇಒ ಶೇಖರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ ಅವರು ಹಲವು ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರು ಇದ್ದರು.