ಕನ್ನಡಪ್ರಭವಾರ್ತೆ ಸಾಗರ
ಮನವಿ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ಕಳೆದ ಮೂರು ತಿಂಗಳಿನಿಂದ ಅರಣ್ಯವಾಸಿಗಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರ ಏಕಾಏಕಿ ನಿಲ್ಲಿಸಲಾಗಿದೆ. ಇದರಿಂದ ಅರಣ್ಯದಲ್ಲಿರುವ ಹಸಲರು, ಬುಡಕಟ್ಟು ಜನರು ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಪೌಷ್ಟಿಕ ಆಹಾರ ಸರಬರಾಜು ಆಗದಿರುವ ಕುರಿತು ಅಧಿಕಾರಿಗಳ ಕೇಳಿದರೆ ಟೆಂಡರ್ ಆಗಿಲ್ಲ ಎಂದು ಹೇಳುತ್ತಿದ್ದಾರೆ. ತಕ್ಷಣ ಪೌಷ್ಟಿಕ ಆಹಾರ ಸರಬರಾಜಿಗೆ ಟೆಂಡರ್ ಕರೆದು ಆಹಾರ ಪೂರೈಸಬೇಕು. ಜೂನ್ ೧೫ರೊಳಗೆ ಪೌಷ್ಟಿಕ ಆಹಾರ ಸರಬರಾಜು ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಮೂಲ ಬುಡಕಟ್ಟು ಜನರ ಬೇಡಿಕೆಯ ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ವಾಲ್ಮಿಕಿ ಅಭಿವೃದ್ದಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಮೂಲಕ ವಿವಿಧ ಯೋಜನೆ ತಲುಪಿಸುವ ಉದ್ದೇಶ ಸರ್ಕಾರ ಹೊಂದಿದ್ದರೂ ಎರಡೂ ಇಲಾಖೆಗಳು ಸೌಲಭ್ಯವನ್ನು ತಲುಪಿಸುವಲ್ಲಿ ವೈಫಲ್ಯ ಅನುಭವಿಸಿದೆ. ಮನೆ ನಿರ್ಮಾಣ, ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯಕ್ಕೂ ಸತಾಯಿಸುತ್ತಿದೆ. ಗ್ರಾಮ ಪಂಚಾಯ್ತಿ ಮೂಲಕ ಮನೆಗೆ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಮುಂದಾಗಿರುವ ಕ್ರಮವೇ ಅವೈಜ್ಞಾನಿಕವಾಗಿದೆ. ಮನೆ ನಿರ್ಮಾಣಕ್ಕೆ ಸರಿಯಾಗಿ ಸಹಾಯಧನ ನೀಡುತ್ತಿಲ್ಲ. ಸ್ವಯಂ ಉದ್ಯೋಗಕ್ಕೆ ಕಡಿಮೆ ಹಣ ನೀಡಲಾಗುತ್ತಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ, ಪ್ರಮುಖರಾದ ಲಕ್ಷ್ಮಮ್ಮ ಹಿರೇಮನೆ, ನಾಗರತ್ನಾ, ಕಮಲಾಕ್ಷಿ, ಪಾರ್ವತಿ, ವಸುಮತಿ ಇನ್ನಿತರರಿದ್ದರು.