ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅಕ್ರಮ ಗಣಿಗಾರಿಕೆ ಕೇಸಿನಲ್ಲಿ ಶಾಸಕ ಹರೀಶ್ ಪೂಂಜ ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ ಪ್ರಕರಣದಲ್ಲಿ ಪೊಲೀಸರು ಹಿಮ್ಮೆಟ್ಟಿಲ್ಲ, ಜನಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಮನವಿಯ ಮೇರೆಗೆ ವಾಪಸು ಬಂದಿದ್ದೇವೆ. ಹಾಗೂ ಕೇಸಿನ ಬಗ್ಗೆ ಠಾಣೆಗೆ ಹಾಜರಾದ ಶಾಸಕರಿಗೆ ಸ್ಟೇಷನ್ ಜಾಮೀನು ನೀಡಲಾಗಿದೆ, ಎರಡೂ ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಸಿ.ಬಿ.ಹೇಳಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊದಲಿಗೆ ಶಾಸಕರ ಮನೆಗೆ ಮೂವರು ಪೊಲೀಸರನ್ನು ವಿಚಾರಣೆಗೆ ಹಾಜರಾಗಲು ತಿಳಿಸಲು ಕಳುಹಿಸಲಾಗಿತ್ತು. ಈ ವೇಳೆ ಅಧಿಕ ಸಂಖ್ಯೆಯ ಜನ ಸೇರಿದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ಕಳುಹಿಸುವುದು ಅನಿವಾರ್ಯವಾಯಿತು ಎಂದರು.
ಆರೋಪಿ ಶಶಿರಾಜ್ ಶೆಟ್ಟಿ ಅವರು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವ ಕುರಿತು ಅಲ್ಲಿನ ಕೆಲಸಗಾರರು ತಿಳಿಸಿದ್ದು, ತಹಸಿಲ್ದಾರ್ ಈ ಬಗ್ಗೆ ದೂರು ನೀಡಿದ ಆಧಾರದಲ್ಲಿ ಬಂಧಿಸಿ, ಎಫ್ ಐಆರ್ ದಾಖಲಿಸಲಾಗಿದೆ. ಇನ್ನೋರ್ವ ಆರೋಪಿ ಪ್ರಮೋದ್ ದಿಡುಪೆ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಜಾಲತಾಣ ಬಳಕೆ ಎಚ್ಚರವಿರಲಿ:ಇಂದಿನ ದಿನಗಳಲ್ಲಿ ಸೈಬರ್ ವಂಚನೆಗಳು ಅಧಿಕಗೊಳ್ಳುತ್ತಿದ್ದು ಜನರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದ ಅವರು, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಟೆಲಿಗ್ರಾಂ, ವಾಟ್ಸಪ್ ಮೊದಲಾದವುಗಳನ್ನು ಬಳಸುವಾಗ ಹೆಚ್ಚಿನ ಎಚ್ಚರವಿರಬೇಕು ಎಂದರು.
ಲಿಂಕ್ ಗಳ ಮೂಲಕ ಕಡಿಮೆ ದರಕ್ಕೆ ವಸ್ತುಗಳ ಆಮಿಷ ತೋರಿಸುವ ವಂಚನೆ ಜಾಲಗಳು ಇಲ್ಲಿ ಸಕ್ರಿಯವಾಗಿವೆ. ಯಾವುದೇ ಕಾರಣಕ್ಕೂ ಅನಾಮಧೇಯ ಕರೆಯ ವಿಡಿಯೋ ಕಾಲ್ ಸ್ವೀಕರಿಸಬಾರದು ಯಾವುದೇ ದಾಖಲೆ, ಒಟಿಪಿ ನೀಡಬಾರದು. ಈ ಬಗ್ಗೆ ಮುಂದಿನ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಸಂದೇಶಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಕಳ್ಳತನಗಳು ಹೆಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ವಾಣಿಜ್ಯೋದ್ಯಮಿಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಪಂಚಾಯಿತಿಗಳು ಈ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಗಮನಹರಿಸಬೇಕು. ಸಿಸಿಟಿವಿ ದಾಖಲೆಗಳು ತನಿಖೆಗೆ ಹೆಚ್ಚು ಸಹಕಾರಿಯಾಗುತ್ತವೆ ಎಲ್ಲಾ ಪ್ರಕರಣಗಳನ್ನು ತನಿಖೆ ಹಂತದಲ್ಲಿದ್ದು ಭೇದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.