ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಹಾರಂಗಿ ಜಲಾಶಯದ ಹಿನ್ನೀರಿನ ಹೆರೂರು ಗ್ರಾಮದಲ್ಲಿ ತಮಿಳುನಾಡು ಮೂಲದ ವಿದ್ಯಾರ್ಥಿ ನೀರಿಗಿಳಿದು ಹೊರಬರಲಾಗದೆ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.ತಮಿಳುನಾಡು ನಿವಾಸಿ, ಬೆಂಗಳೂರಿನ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ (22) ಮೃತರು. ಅವರು ತನ್ನ ಕಾಲೇಜಿನ ತಂಡದೊಂದಿಗೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು. ಶನಿವಾರ ಬೆಳಗ್ಗೆ ಹೇರೂರಿನಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನ ವೀಕ್ಷಣೆಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಮುಳುಗು ತಜ್ಞರಿಂದ, ಪೊಲೀಸರು, ದುಬಾರೆ ರ‍್ಯಾಪ್ಟಿಂಗ್ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು. ಆಗಿಂದಾಗ್ಗೆ ಇಲ್ಲಿ ಪ್ರವಾಸಿಗರು ಬಂದಾಗ ಇಲ್ಲಿನ ಪರಿಸ್ಥಿತಿ ತಿಳಿಯದೆ ನೀರಿಗಿಳಿದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಸುಂಟಿಕೊಪ್ಪ ಹೋಬಳಿಯ ಹಾದ್ರೆ ಮತ್ತು ಹೆರೂರು ಗ್ರಾಮವು ಮೇಲ್ನೋಟಕ್ಕೆ ಹಾರಂಗಿ ಹಿನ್ನೀರು ಅದ್ಬುತವಾದ ಪ್ರವಾಸಿ ತಾಣವಾಗಿದೆ. ಆದರೆ ಪ್ರವಾಸೋದ್ಯಮ ಇಲಾಖೆ, ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಈ ಪ್ರದೇಶದ ಬಗ್ಗೆ ಗಮನಹರಿಸದಿರುವುದರಿಂದ ಸಾಕಷ್ಟು ಅನಾಹುತ ಹಾಗೂ ಪ್ರವಾಸಿಗಾರ ಜೀವಕ್ಕೆ ಮೃತ್ಯು ಕೂಪವಾಗುತ್ತಿದೆ.

ಪರಿಸರದ ಆಳ ಆರಿವು ಮಾಹಿತಿ ಇಲ್ಲದೆ ಪ್ರವಾಸಿಗರು ನೀರಿಗಿಳಿದು ಕೆಸರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಹಿ ಘಟನೆಗಳು ಸಂಭವಿಸಿದಾಗ ಅಧಿಕಾರಿಗಳು ಆಗಮಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ ಹೊರತು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಪ್ರವಾಸಿಗರಿಗೆ ಮಾಹಿತಿ ನೀಡಲು 2 ಸೂಚನಾ ಫಲಕಗಳನ್ನು ಮಾತ್ರ ಅಳವಡಿಸಲಾಗಿದೆ. ಆದರೆ ಪ್ರವಾಸಿಗರು ನೀರಿಗಿಳಿಯದಂತೆ ಎಚ್ಚರಿಸುವ ಮಾಹಿತಿ ಫಲಕ ಹಾಕಬೇಕಾಗಿದೆ. ಅಲ್ಲದೆ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಕನಿಷ್ಠ ಬೇಕಾಗಿರುವ ಮೂಲ ಸೌಕರ್ಯ ಅಥವಾ ಅನಾಹುತಗಳು ಘಟಿಸದಂತೆ ತಡೆಯುವ ಮತ್ತು ರಕ್ಷಣಾ ಕಾರ್ಯವನ್ನು ನಡೆಸಲು ತರಬೇತು ಪಡೆದ ಸಿಬ್ಬಂದಿ ಇಲ್ಲದೆ ಸಾಕಷ್ಟು ಮಂದಿ ಈ ಪ್ರದೇಶಕ್ಕೆ ಬಂದು ಜೀವ ಕಳೆದುಕೊಂಡ ಸಾಕಷ್ಟು ಉದಾಹರಣೆಗಳು ಜನಮಾನಸದಲ್ಲಿ ಇಂದಿಗೂ ಹಸಿರಾಗಿದೆ.