ಜಿಲ್ಲಾ ಮಟ್ಟದ ಜಾಗೃತ, ಉಸ್ತುವಾರಿ ಸಮಿತಿ ಸಭೆಯಲ್ಲಿ ಕೆ.ಲಕ್ಷ್ಮೀಪ್ರಿಯಾ ಸೂಚನೆಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅನವಶ್ಯಕ ವಿಳಂಬವಾಗುವುದನ್ನು ತಪ್ಪಿಸಿ, ಆದಷ್ಟು ಶೀಘ್ರದಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2022ರಿಂದ ಇದುವರೆಗೆ ಒಟ್ಟು 168 ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 4 ಪ್ರಕರಣಗಳು ಇತರೆ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಎಫ್ಐಆರ್ ದಾಖಲಾಗಿರುವ 153 ಪ್ರಕರಣಗಳಲ್ಲಿ ₹117.01 ಲಕ್ಷ ಪರಿಹಾರ ವಿತರಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ 108 ಪ್ರಕರಣಗಳಲ್ಲಿ ₹127.99 ಲಕ್ಷ ಪರಿಹಾರ ವಿತರಿಸಲಾಗಿದೆ. ದೌರ್ಜನ್ಯ ಪ್ರಕರಣಗಳು ದಾಖಲಾದ ಕೂಡಲೇ ಸಂತ್ರಸ್ತರಿಂದ ಸಂಬಂಧಪಟ್ಟ ಅಗತ್ಯ ದಾಖಲೆ ಪಡೆದು ಆದಷ್ಟು ಶೀಘ್ರದಲ್ಲಿ ಪರಿಹಾರ ವಿತರಣೆ ಮಾಡುವಂತೆ ಸೂಚಿಸಿದರು.ಜಿಲ್ಲೆಯ ಎಲ್ಲಾ ಉಪವಿಭಾಗಗಳ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸುವ ಮೂಲಕ ಜಿಲ್ಲೆಯಲ್ಲಿನ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಜನತೆಯ ಸಮಸ್ಯೆ ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು. ದೌರ್ಜನ್ಯ ಪ್ರಕರಣಗಳ ಕುರಿತಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳು ಶೀಘ್ರವಾಗಿ ವಿಚಾರಣೆಯಾಗಿ ಸಂತ್ರಸ್ತರಿಗೆ ಆದಷ್ಟು ತ್ವರಿತವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಜಾಗೃತ ಸಮಿತಿಯ ಸದಸ್ಯರು ಮಾತನಾಡಿ, ಕುಮಟಾದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿ ನೀಡುವಂತೆ, ಸಮುದಾಯ ಭವನಗಳಲ್ಲಿ ನಿಗದಿಪಡಿಸಿರುವ ದರವನ್ನು ಕಡಿಮೆಗೊಳಿಸುವ ಬಗ್ಗೆ, ಪ.ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ತಡೆಯುವ ಬಗ್ಗೆ, ಬ್ಯಾಂಕ್‌ಗಳಲ್ಲಿ ಶೀಘ್ರದಲ್ಲಿ ಸಾಲ ವಿತರಿಸುವಂತೆ, ವಸತಿ ರಹಿತರಿಗೆ ನಿವೇಶನ ನೀಡುವುದು ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ವಿವರಿಸಿದರು.ಈ ಎಲ್ಲಾ ಸಮಸ್ಯೆಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಸರ್ಕಾರಿ ಅಭಿಯೋಜಕಿ ಸುನೀತಾ ನಾಗೇಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಇದ್ದರು.