ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶಹರಿ ರೋಜ್ಗಾರ್ ಭವನದಲ್ಲಿ ನಡೆದ ಪುರಸಭೆಯ 2026-27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಕೆಲವು ಮುಖಂಡರು ಮಾತನಾಡಿ, ಕುಡಿಯುವ ನೀರು, ವಿದ್ಯುತ್ ದೀಪ, ಫುಟ್ ಪಾತ್ ಒತ್ತುವರಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮಾಜಿ ಸದಸ್ಯ ಎಚ್.ಆರ್.ಲೋಕೇಶ್ ಮಾತನಾಡಿ, ಹೊಸಹೊಳಲು ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಬಳಿ ಹೈಮಾಸ್ಟ್ ದೀಪ ಕೆಟ್ಟು ನಿಂತಿದೆ. ಅಲ್ಲದೆ ಬಹುತೇಕ ಬಡಾವಣೆಗಳಲ್ಲಿ ನಲ್ಲಿ ನೀರು ಲೀಕೇಜ್ ಆಗಿ ಪೋಲಾಗುತ್ತಿದೆ. ಕೆಲವು ಕಡೆ ಚರಂಡಿ ನೀರು ಸೇರಿ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದರು.ಫುಟ್ ಪಾತ್ ಒತ್ತುವರಿಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಬಹುತೇಕ ಕಡೆ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದರೂ ನಮ್ಮ ಪಟ್ಟಣದಲ್ಲಿ ಮಾತ್ರ ಇದು ಆಗುತ್ತಿಲ್ಲ. ಫುಟ್ ಪಾತ್ ವ್ಯಾಪಾರಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ತಿಳಿಸಿದರು.
ಪಟ್ಟಣದಲ್ಲಿ ಎರಡು ಕಡೆ ವಿದ್ಯುತ್ ಚಿತಾಗಾರ ನಿರ್ಮಿಸಬೇಕು. ತಕ್ಷಣವೇ ಪಟ್ಟಣದ ದೇವೀರಮ್ಮಣ್ಣಿ ಕೆರೆ ಕೋಡಿ ಮತ್ತು ಹೊಸ ಹೊಳಲು ಚಿಕ್ಕ ಕೆರೆ ಏರಿ ಬಳಿ ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ಒತ್ತಾಯಿಸಿದರು.
ಬಡಾವಣೆಗಳ ಅಭಿವೃದ್ಧಿ ವೆಚ್ಚ ನಮ್ಮದು. ಆದರೆ, ಕಂದಾಯ ಮತ್ತಿತರ ಆದಾಯಗಳು ನೆರೆಯ ಗ್ರಾಪಂಗಳಿಗೆ ಹೋಗುತ್ತಿದೆ. ಇದರಿಂದ ಪುರಸಭೆಗೆ ನಷ್ಠವಾಗುತ್ತಿದೆ. ತಕ್ಷಣವೇ ಜಿಲ್ಲಾಧಿಕಾರಿಗಳೊಂದಿಗೆ ಬಡಾವಣೆಗಳನ್ನು ಪುರಸಭಾ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸಭೆಗೆ ಪುರಸಭೆಗೆ ಆಡಳಿತಧಿಕಾರಿಗಳಾಗಿರುವ ಎಸಿ ಡಾ.ಕೆ.ಶ್ರೀನಿವಾಸ್ ಅವರು ಗೈರಾಗಿರುವುದಕ್ಕೆ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ಖಂಡಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸದಸ್ಯರಾದ ತಿಮ್ಮೇಗೌಡ, ಪ್ರಮೋದಕುಮಾರ್, ಅಸ್ಮತ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬನ್ನಾರಿ, ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಹೊಸಹೊಳಲು ಪುಟ್ಟರಾಜು ಸೇರಿ ಹಲವು ಮುಖಂಡರು ಮತ್ತು ಪುರಸಬಾ ಸಿಬ್ಬಂದಿ ಭಾಗವಹಿಸಿದ್ದರು.