(ಕಡ್ಡಾಯ) ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ: ನ್ಯಾ.ಸಾತ್ವಿಕ್

KannadaprabhaNewsNetwork | Published : Aug 24, 2024 1:17 AM

ಸಾರಾಂಶ

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು ಕೊರತೆ

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು ಕೊರತೆ ಕಂಡು ಬಂದಿದ್ದು, ಕೂಡಲೇ ಅಗತ್ಯ ಸೌಲಭ್ಯ ಕಲ್ಪಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಸರಿಯಾದ ಕಂಪೌಂಡ್ ಗೊಡೆ ಮತ್ತು ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 2,856 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ ಒಟ್ಟು 1895 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಉಳಿದ 783 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಹಾಗೂ 178 ಕೇಂದ್ರಗಳು ವಿವಿಧ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳ ಮೂಲಕ 6 ತಿಂಗಳಿಂದ 6ವರ್ಷದ ಒಟ್ಟು 1,74,020 ಮಕ್ಕಳು ಹಾಗೂ 22,909 ಗರ್ಭಿಣಿಯರು ಮತ್ತು 22,166 ಬಾಣಂತಿಯರಿಗೆ ಪ್ರತಿದಿನ ಪೂರಕ ಪೌಷ್ಠಿಕ ಆಹಾರ ಹಾಗೂ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಅಂಗನವಾಡಿ ಕೇಂದ್ರಗಳಲ್ಲಿ ಸುರಕ್ಷಿತವಾದ ಕುಡಿಯುವ ನೀರಿನ ವ್ಯವಸ್ಥೆ, ದೈನಂದಿನ ಬಿಸಿ ಊಟದಲ್ಲಿ ತರಕಾರಿ ಹಾಗೂ ಶಾಲಾ ಪೂರ್ವ ಶಿಕ್ಷಣ ಸಾಮಾಗ್ರಿಗಳನ್ನು ಸರಿಯಾಗಿ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಬೇಕು.

ಹಲವು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲಿದ್ದು, ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಒಳಾಂಗಣ ಮತ್ತು ಹೊರಾಂಗಣ ಮೈದಾನದ ವ್ಯವಸ್ಥೆ ಮಾಡಬೇಕು ಹಾಗೂ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದಾರೆ.

Share this article