ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬೆಂಗಳೂರಿನ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ ೪೧೯ರಲ್ಲಿ ಮುಂಬರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಸಂಬಂಧ ಮಂಗಳವಾರ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಎರಡು ಹಬ್ಬಗಳ ಜಾತ್ರಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಾಧಿಕಾರದ ವತಿಯಿಂದ ಕಳೆದ ಬಾರಿಗಿಂತ ಹೆಚ್ಚಿನ ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆಯು ಫೆಬ್ರವರಿ ೧೪ರಿಂದ ೧೮ರವರೆಗೆ ೫ ದಿನಗಳ ಕಾಲ ಹಾಗೂ ಮಾರ್ಚ್ ೧೬ರಿಂದ ೧೯ರವರೆಗೆ ೪ ದಿನಗಳ ಕಾಲ ಯುಗಾದಿ ಜಾತ್ರೆಯಲ್ಲಿ ಮಹದೇಶ್ವರ ಸ್ವಾಮಿಗೆ ವಿವಿಧ ಧಾರ್ಮಿಕ ಸೇವೆಗಳು ನಡೆಯಲಿದೆ. ಈ ಅವಧಿಯಲ್ಲಿ ಬೆಟ್ಟಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಸಿದ್ದತಾ ಕಾರ್ಯಗಳನ್ನು ಸುಸೂತ್ರವಾಗಿ ನಿರ್ವಹಿಸಬೇಕು. ಕುಡಿಯುವ ನೀರು, ಸ್ವಚ್ಚತೆ, ದಾಸೋಹ, ದರ್ಶನ, ನೆರಳಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅವಶ್ಯ ಸೌಲಭ್ಯಗಳನ್ನು ಮಾಡಬೇಕು. ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸುವಂತೆ ಸಚಿವರು ತಿಳಿಸಿದರು.
ಕ್ಷೇತ್ರಕ್ಕೆ ಆಗಮಿಸುವ ಭಕ್ತಧಿಗಳಿಗೆ ಬೆಳಿಗ್ಗೆ ೭ ಗಂಟೆಯಿಂದ ಮಧ್ಯರಾತ್ರಿವರೆಗೆ ನಿರಂತರ ದಾಸೋಹ ವ್ಯವಸ್ಥೆ ಇರಬೇಕು. ಹಿರಿಯ ನಾಗರಿಕರಿಗೆ ದರ್ಶನಕ್ಕಾಗಿ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಬೇಕು. ಕೌದಳ್ಳಿಯಿಂದ ಬೆಟ್ಟಕ್ಕೆ ಪಾದಾಯಾತ್ರೆ ಮೂಲಕ ಬರುವ ಜನರಿಗೆ ಮಾರ್ಗದುದ್ದಕ್ಕೂ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗಬೇಕು. ಬೆಟ್ಟದಲ್ಲಿ ಚಿರತೆ ದಾಳಿ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಅರಣ್ಯ ರಕ್ಷಕರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪ್ರಾಧಿಕಾರದಿಂದ ೫೦ ಮಂದಿ ಗೃಹರಕ್ಷಕರನ್ನು ಭದ್ರತೆಗಾಗಿ ನಿಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.ಜಾತ್ರಾ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ಸಲುವಾಗಿ ತಾಳುಬೆಟ್ಟ ಹಾಗೂ ಪಾಲಾರ್ ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಪಾದಾಯಾತ್ರಿಗಳನ್ನು ಮತ್ತು ಭಕ್ತಾಧಿಗಳು ತೆರಳುವ ಬಸ್‌ಗಳು ಸೇರಿದಂತೆ ಎಲ್ಲಾ ಬಗೆಯ ವಾಹನಗಳನ್ನು ವ್ಯಾಪಕವಾಗಿ ತಪಾಸಣೆ ಮಾಡಬೇಕು. ಜಾತ್ರೆ ಆರಂಭದ ಒಂದು ವಾರ ಮೊದಲಿನಿಂದ ಮತ್ತು ಜಾತ್ರೆ ಮುಗಿದ ಒಂದು ವಾರದವರೆಗೆ ೨೪*೭ ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳಬೇಕು. ತಾಳುಬೆಟ್ಟ ಹಾಗೂ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆದು ಭಕ್ತಾಧಿಗಳಿಗೆ ಆರೋಗ್ಯ ಸೇವೆ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಸಾಲೂರು ಮಠದ ಅಧ್ಯಕ್ಷ ಹಾಗೂ ಪ್ರಾಧಿಕಾರದ ಶಾಶ್ವತ ಸದಸ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀ, ಶಾಸಕರಾದ ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.