ಬಿಎಲ್‌ಒಗಳಿಗೆ ಅಗತ್ಯ ದಾಖಲೆ ನೀಡಿ ಸಹಕರಿಸಿ

KannadaprabhaNewsNetwork |  
Published : Jul 09, 2026, 01:15 AM IST
ಪೋಟೊ8ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ತಾಲೂಕಾಡಳಿತ ಮತ್ತು ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ನಡೆದ ಎಸ್‌ಐಆರ್‌ ಜಾಗೃತಿ ಜಾಥಾದಲ್ಲಿ ತಾಪಂ ಇಒ ಅಮರೇಶ ಯಾದವ್‌ ಮಾತನಾಡಿದರು. | Kannada Prabha

ಸಾರಾಂಶ

ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ

ಕುಷ್ಟಗಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026ರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಾಡಳಿತ ಮತ್ತು ತಾಲೂಕು ಸ್ವೀಪ್‌ ಸಮಿತಿಯಿಂದ ಪಟ್ಟಣದಲ್ಲಿ 70ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳೊಂದಿಗೆ ಸುಮಾರು 15 ಕಿಮೀ ದೂರದ ಬೃಹತ್ ಬೈಕ್ ಜಾಗೃತಿ ಜಾಥಾ ನಡೆಯಿತು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಬೃಹತ್ ಬೈಕ್ ಜಾಗೃತಿ ಜಾಥಾವು ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಟಕ್ಕಳಕಿ, ಬಿಜಕಲ್ ಹಾಗೂ ಹೆಸರೂರು ಮಾರ್ಗದ ಮೂಲಕ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವಸ್ಥಾನದವರೆಗೆ ಸಂಚರಿಸಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕರೆ ನೀಡಿದರು.

ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಅಮರೇಶ ಯಾದವ್‌ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲಿಸಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ಅಗತ್ಯ ದಾಖಲೆ ಒದಗಿಸಿ ಎಸ್‌ಐಆರ್ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಹೊಸ ಮತದಾರರ ಸೇರ್ಪಡೆ, ಮರಣ ಹೊಂದಿದವರು, ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಹೆಸರು ಗುರುತಿಸಿ ಮತದಾರರ ಪಟ್ಟಿ ನಿಖರಗೊಳಿಸುವುದೇ ಈ ವಿಶೇಷ ಪರಿಷ್ಕರಣೆಯ ಉದ್ದೇಶ ಎಂದು ವಿವರಿಸಿದರು.

ತಹಸೀಲ್ದಾರ್ ಗುರುರಾಜ್ ಛಲವಾದಿ ಮಾತನಾಡಿ, ಜೂ.30ರಿಂದ ಜು. 29ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೂ ಮೂರು ಬಾರಿ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಸಾರ್ವಜನಿಕರು ಅಗತ್ಯ ದಾಖಲೆ ಒದಗಿಸಿ ಸಹಕರಿಸಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರಿಗೆ ಇದು ಉತ್ತಮ ಅವಕಾಶವಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ, ಬಿಇಒ ಉಮಾದೇವಿ ಬಸಾಪೂರು, ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಸೇರಿದಂತೆ ತಾಪಂ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

ಜಾನಪದ ಹಾಡುಗಳ ಮೂಲಕ ಜಾಗೃತಿ: ಜಾನಪದ ಹಿರಿಯ ಕಲಾವಿದ ಶರಣಪ್ಪ ವಡಗೇರಿ ತಂಡದವರು ಜಾಥಾ ವೇಳೆ ಪ್ರಮುಖ ವೃತ್ತಗಳಲ್ಲಿ ಮತದಾನ ಜಾಗೃತಿ ಕುರಿತ ಜಾನಪದ ಹಾಡು ಹಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಬೈಕ್ ಜಾಥಾದುದ್ದಕ್ಕೂ ಎಸ್‌ಐಆರ್ ಕುರಿತು ಘೋಷಣೆ ಕೂಗುತ್ತಾ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ಸಾಗಾಟಕ್ಕೆ ಅಡ್ಡಿ : ಮಹಾ ಸಿಎಂ ಜೊತೆ ಸಭೆ
ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ